ಕೊಡಕ್ಕಲ್ಲು: ಕಾಲುದಾರಿ, ತಡೆಗೋಡೆ ಕಾಮಗಾರಿಗೆ ಶಿಲಾನ್ಯಾಸ
ಕೊಣಾಜೆ, ಜ.9 : ಕುರ್ನಾಡು ಗ್ರಾಮದ ಕೊಡಕ್ಕಲ್ಲು-ಮಿಜಾರು ಪ್ರದೇಶದಲ್ಲಿ ಹಲವಾರು ಮೂಲಭೂತ ಸಮಸ್ಯೆಗಳಿದ್ದು, ಇದೀಗ ಕುರ್ನಾಡು ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಅನುದಾನದೊಂದಿಗೆ ಕಾಲು ದಾರಿ ಮತ್ತು ತಡೆಗೋಡೆ ರಚನೆ ಕಾಮಗಾರಿ ಕೆಲಸ ಆರಂಭಗೊಂಡಿದ್ದು, ಹಂತ ಹಂತವಾಗಿ ಈ ಭಾಗದ ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದು ಬಿಜೆಪಿಯ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಅವರು ಅಭಿಪ್ರಾಯ ಪಟ್ಟರು.
ಅವರು ಕುರ್ನಾಡು ಗ್ರಾಮದ ಕೊಡಕ್ಕಲ್ಲು ಮಿಜಾರು ಪ್ರದೇಶದಲ್ಲಿ ಸೋಮವಾರ ಕಾಲುದಾರಿ ಹಾಗೂ ತಡೆಗೋಡೆ ರಚನೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯಬೇಕಾದರೂ ಜನರ ಸಹಕಾರ ಮತ್ತು ಸಹಭಾಗಿತ್ವ ಅಗತ್ಯವಾಗಿದೆ. ಅಲ್ಲದೆ ಯಾವುದೇ ಗ್ರಾಮ ಅಭಿವೃದ್ಧಿಯಾಗಬೇಕಾದರೂ ಆ ಭಾಗದ ಜನಪ್ರತಿನಿಧಿಗಳ ಜವಬ್ಧಾರಿಯೊಂದಿಗೆ ಆ ಗ್ರಾಮದ ಜನರ ಸಹಕಾರ, ಆಸಕ್ತಿಯೂ ಕೂಡಾ ಪ್ರಮುಖವಾಗುತ್ತದೆ ಎಂದು ಹೇಳಿದರು.
ಅಮ್ಮೆಂಬಳ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಟಿ.ಜಿ.ರಾಜಾರಾಮ ಭಟ್ ಮಾತನಾಡಿ, ಕೊಡಕ್ಕಲ್ಲು ಪ್ರದೇಶವು ಗ್ರಾಮೀಣ ಭಾಗವಾಗಿದ್ದು, ಹಲವಾರು ಮೂಲಭೂತ ಸಮಸ್ಯೆಗಳಿದ್ದರೂ ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಕುರ್ನಾಡು ಗ್ರಾಮ ಪಂಚಾಯಿತಿನ ಸಹಕಾರದಿಂದ ಹಂತ ಹಂತವಾಗಿ ಅಭಿವೃದ್ಧಿ ಕಾಣಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾದ ನವೀನ್ ಪಾದಲ್ಪಾಡಿ, ಕುರ್ನಾಡು ಗ್ರಾಮ ಪಂಚಾಯಿತಿ ಸದಸ್ಯರಾದ ಶೈಲಜಾ ಮಿತ್ತಕೋಡಿ, ಉಪಾಧ್ಯಕ್ಷರಾದ ನಿತಿನ್ ಗಟ್ಟಿ, ಪಂಚಾಯತ್ ಸದಸ್ಯರಾದ ಶಿವಶಂಕರ ಭಟ್, ಗೋಪಾಲ ಬಂಗೇರ, ಗೀತಾ ಸ್ಥಳೀಯರಾದ ವಿಕಾಸ್, ಮೋಹನ್, ನವೀನ್ ಶೆಟ್ಟಿ, ಶೇಖರ್ ಗಟ್ಟಿ, ಮನೋಜ್ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.