ಯುಎಇನಲ್ಲಿ ಸಂತ್ರಸ್ತರಾದ 41 ಭಾರತೀಯ ನಾವಿಕರ ವಾಪಸಾತಿಗೆ ಯತ್ನ: ಸುಷ್ಮಾ
ಹೊಸದಿಲ್ಲಿ,ಜ.9: ಯುಎಇನ ಅಜ್ಮಾನ್‌ನಲ್ಲಿ ಸೂಕ್ತ ದಾಖಲೆಗಳಿಲ್ಲದೆ ವ್ಯಾಪಾರಿ ಹಡಗುಗಳಲ್ಲಿ ಸಿಕ್ಕಿಹಾಕಿಕೊಂಡಿರುವ 41 ಭಾರತೀಯ ನಾವಿಕರನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ತೀವ್ರ ಪ್ರಯತ್ನಗಳನ್ನು ನಡೆಸುತ್ತಿದೆಯೆಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸೋಮವಾರ ತಿಳಿಸಿದ್ದಾರೆ.
ಸಂತ್ರಸ್ತ ನಾವಿಕರಿಗೆ ಆಹಾರ ಮತ್ತಿತರ ಅಗತ್ಯ ವಸ್ತುಗಳ ಪೂರೈಕೆ ಮಾಡುವಂತೆ ಯುಎಇನಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಸೂಚನೆ ನೀಡಲಾಗಿದೆಯೆಂದು ಸ್ವರಾಜ್ ಹೇಳಿದ್ದಾರೆ. ವರದಿಗಳ ಪ್ರಕಾರ, ಯುಎಇನಲ್ಲಿ 41 ಭಾರತೀಯ ನಾವಿಕರು, ಯುಎಇನ ಅಜ್ಮಾನ್‌ನಲ್ಲಿರುವ ಹಡಗುಲಂಗರು ಹಾಕುವ ಸಮುದ್ರ ಪ್ರದೇಶದಲ್ಲಿರುವ ನಾಲ್ಕು ಪರಿತ್ಯಕ್ತ ಹಡಗುಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಈ ಪೈಕಿ ಎರಡು ನೌಕೆಗಳಿಗೆ ತೂತು ಬಿದ್ದಿದ್ದು, ಅವು ಮುಳುಗುವ ಭೀತಿಯನ್ನು ಎದುರಿಸುತ್ತಿದೆ. ಈ ಹಡಗು ಕಂಪೆನಿಯ ಮಾಲಕನು ಈ ನಾವಿಕರನ್ನು ತೊರೆದು ಹೋಗಿದ್ದಾನೆನ್ನಲಾಗಿದೆ.
ಎರಡು ನೌಕೆಗಳ ಕ್ಯಾಪ್ಟನ್‌ಗಳು, ಹಡಗು ಮಾಲಕರು, ಬಂದರು ಅಧಿಕಾರಿಗಳು ಹಾಗೂ ಯುಎಇ ಸರಕಾರವನ್ನು ಈಗಾಗಲೇ ನಾವು ಸಂಪರ್ಕಿಸಿದ್ದೇವೆ. ಸಂತ್ರಸ್ತ ನಾವಿಕರಲ್ಲಿ ಮುಂದಿನ ಎರಡು ವಾರಗಳಿಗೆ ಬೇಕಾಗುವಷ್ಟು ಅಗತ್ಯ ವಸ್ತುಗಳ ಪೂರೈಕೆಯಿದೆ.ನಾವಿಕ ಸಿಬ್ಬಂದಿಯ ಬಿಡುಗಡೆಗಾಗಿ ಸಾಧ್ಯವಿರುವ ಎಲ್ಲಾ ನೆರವನ್ನು ಭಾರತ ಸರಕಾರ ನೀಡಲಿದೆ ಎಂದು ಸುಷ್ಮಾ ಇಂದು ಟ್ವೀಟ್ ಮಾಡಿದ್ದಾರೆ.
ಈ ಹಡಗುಗಳಲ್ಲಿ ಸಿಕ್ಕಿಹಾಕಿಕೊಂಡಿರುವ ನಾವಿಕರು ಕೇರಳ, ಮಹಾರಾಷ್ಟ್ರ, ಒಡಿಶಾ, ಉತ್ತರಪ್ರದೇಶ, ಬಿಹಾರ, ಉತ್ತರಾಖಂಡ, ದಿಲ್ಲಿ, ಪಂಜಾಬ್, ಹರ್ಯಾಣ, ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಿಗೆ ಸೇರಿದವರಾಗಿದ್ದಾರೆ.
ಈ ಮಧ್ಯೆ ಸ್ವರಾಜ್ ಟ್ವೀಟರ್ ನೀಡಿರುವ ಪ್ರತ್ಯೇಕ ಹೇಳಿಕೆಯೊಂದರಲ್ಲಿ ಯುದ್ಧಗ್ರಸ್ತ ಇರಾಕ್‌ನ ಎರ್ಬಿಲ್‌ನಲ್ಲಿ ಸಿಲುಕಿಕೊಂಡಿರುವ ಎಲ್ಲಾ ಭಾರತೀಯರು ಅಲ್ಲಿರುವ ಭಾರತೀಯ ದೂತಾವಾಸ ಕಚೇರಿಯನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ. ಆದರೆ ಅಲ್ಲಿ ಈ ಮೊದಲು ವರದಿಯಾದಂತೆ ಎರ್ಬಿಲ್‌ನಲ್ಲಿ 500 ಮಂದಿ ಭಾರತೀಯರು ಸಂತ್ರಸ್ತರಾಗಿಲ್ಲ. ಅವರ ಸಂಖ್ಯೆ ತುಂಬಾ ಕಡಿಮೆ. ಈಗಾಗಲೇ 52 ಮಂದಿ ಭಾರತೀಯ ಕಾರ್ಮಿಕರನ್ನು ತಾಯ್ನೆಡಿಗೆ ಕರೆತರಲಾಗಿದೆ. ಇನ್ನೂ ನಾಲ್ವರನ್ನು ಕರೆತರುವಂತೆ ಮನವಿಗಳು ಬಂದಿವೆ ಎಂದವರು ತಿಳಿಸಿದರು. ಯಾವ ಭಾರತೀಯ ಕಾರ್ಮಿಕರು ಅವಧಿಮೀರಿ ವಾಸ್ತವ್ಯವಿರಕೂಡದು. ಇದಕ್ಕೆ 6 ಸಾವಿರ ಡಾಲರ್‌ಗೂ ಅಧಿಕ ದಂಡವನ್ನು ತೆರಬೇಕಾಗಬಹುದು. ಈ ಹಿನ್ನೆಲೆಯಲ್ಲಿ ತಾಯ್ನೆಡಿಗೆ ವಾಪಸಾಗುವುದಕ್ಕಾಗಿ ಕಾನ್ಸುಲೇಟ್ ಕಚೇರಿಯನ್ನು ಸಂಪರ್ಕಿಸಬೇಕೆಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.