×
Ad

ದ.ಕ.ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ

Update: 2017-01-09 22:28 IST

ಮಂಗಳೂರು, ಜ.9: ಕ್ರೀಡೆಯಲ್ಲಿ ಭಾಗವಹಿಸುವುದು ಕೇವಲ ಕ್ರೀಡಾಕೂಟಕ್ಕೆ ಮೀಸಲು ಆಗಿರಬಾರದು. ಪ್ರತಿದಿನ ಕ್ರೀಡೆಗಳಲ್ಲಿ ತೊಡಗಿಸಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್ ಹೇಳಿದರು.

ಮಂಗಳೂರು ನಗರ ಪೊಲೀಸ್ ಮತ್ತು ದ.ಕ. ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ನಡೆದ ‘ವಾರ್ಷಿಕ ಪೊಲೀಸ್ ಕ್ರೀಡಾಕೂಟ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ. ರಾಜ್ಯದಲ್ಲೇ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ದ.ಕ. ಜಿಲ್ಲಾ ಪೊಲೀಸ್ ಇಲಾಖೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಕೋಮು ಸಂಘರ್ಷ ಮಟ್ಟಹಾಕಿ ಶಾಂತಿ ನೆಲೆಸುವಲ್ಲಿ ಪೊಲೀಸ್ ಇಲಾಖೆಯ ಶ್ರಮ ಅಪಾರ ಎಂದ ಜಿಲ್ಲಾಧಿಕಾರಿ, ಪೊಲೀಸ್ ವೃತ್ತಿಯು ಸದಾ ಜಾಗೃತ ಮನಸ್ಸಿನಿಂದ ಕೂಡಿರುವಂತದ್ದು. ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ದೈಹಿಕ ಮತ್ತು ಮಾನಸಿಕವಾಗಿ ಸಮರ್ಥರಿರಬೇಕಾಗಿದೆ. ಹಾಗಾಗಿ ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ನಿರ್ದಿಷ್ಟ ಸಮಯವನ್ನು ಕ್ರೀಡೆಗೆ ಮೀಸಲಿಡುವ ಅಗತ್ಯವಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ಸ್ವಾಗತಿಸಿದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗ ಡಿಸಿಪಿ ಕೆ.ಎಂ. ಶಾಂತರಾಜು ವಂದಿಸಿದರು.

ಅಪರಾಧ ಮತ್ತು ಸಂಚಾರ ವಿಭಾಗ ಡಿಸಿಪಿ ಡಾ. ಸಂಜೀವ್ ಎಂ. ಪಾಟೀಲ್, ಹೆಚ್ಚುವರಿ ಎಸ್ಪಿ ಡಾ. ಸಿ.ಬಿ. ವೇದಮೂರ್ತಿ, ಎಸಿಪಿಗಳಾದ ಉದಯ ಎಂ. ನಾಯಕ್, ಶ್ರುತಿ ಎನ್.ಎಸ್., ರಾಜೇಂದ್ರ ಡಿ.ಎಸ್., ಕೆ. ತಿಲಕ್‌ಚಂದ್ರ, ವೆಲೆಂಟೈನ್ ಡಿಸೋಜ ಉಪಸ್ಥಿತರಿದ್ದರು.

ಎಸ್ಸೈ ಚಂದ್ರಶೇಖರ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಹರಿಶ್ಚಂದ್ರ ಬೈಕಂಪಾಡಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಸ್. ಮೊಯ್ದಿನ್ ಕುಂಞ್ಞೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News