×
Ad

ಕತರ್‌ನಲ್ಲಿ ಮರಣದಂಡನೆ ವಿಧಿಸಲ್ಪಟ್ಟ ಭಾರತೀಯರಿಬ್ಬರ ಪರವಾಗಿ ಕ್ಷಮಾದಾನ ಅರ್ಜಿಗೆ ಕೇಂದ್ರ ನಿರ್ಧಾರ

Update: 2017-01-09 22:28 IST

ಹೊಸದಿಲ್ಲಿ, ಜ.9: ನಾಲ್ಕು ವರ್ಷಗಳ ಹಿಂದೆ ಮಹಿಳೆಯೊಬ್ಬಳನ್ನು ಕೊಲೆಗೈದ ಆರೋಪದಲ್ಲಿ ಕತರ್ ಸುಪ್ರೀಂಕೋರ್ಟ್‌ನಿಂದ ಮರಣದಂಡನೆ ವಿಧಿಸಲ್ಪಟ್ಟ ತಮಿಳುನಾಡಿನ ಇಬ್ಬರು ವ್ಯಕ್ತಿಗಳ ಕುಟುಂಬ ಸದಸ್ಯರ ಪರವಾಗಿ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.

   ಈ ಹಿನ್ನೆಲೆಯಲ್ಲಿ ಆರೋಪಿಗಳಾದ ಅಳಗಪ್ಪ ಸುಬ್ರಮಣಿಯನ್ ಹಾಗೂ ಚೆಲ್ಲದೊರೈ ಪೆರುಮಾಳ್ ಪರವಾಗಿ ಕ್ಷಮಾದಾನ ಕೋರಿಕೆಯ ಅರ್ಜಿಯನ್ನು ಸಲ್ಲಿಸಲು ನೆರವಾಗುವಂತೆ ಅವರು ತಮಿಳುನಾಡು ಸರಕಾರಕ್ಕೆ ಮನವಿ ಮಾಡಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ಟ್ವೀಟ್ ಮಾಡಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿ ವರದಿಯನ್ನು ಸಲ್ಲಿಸುವಂತೆ ಅವರು ಎರಡು ದಿನಗಳ ಹಿಂದೆ ಕತರ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿಯನ್ನು ಕೋರಿದ್ದರು.

ಕತರ್ ನ್ಯಾಯಾಲಯವು ಈ ಇಬ್ಬರು ಅಪರಾಧಿಗಳ ಮರಣದಂಡನೆಯನ್ನು ರದ್ದುಪಡಿಸಬೇಕೆಂಬ ಭಾರತೀಯ ರಾಯಭಾರಿ ಕಚೇರಿಯ ಕೋರಿಕೆಯನ್ನು ತಿರಸ್ಕರಿಸಿತ್ತು. ಆದರೆ ಪ್ರಕರಣದ ಮೂರನೆ ಆರೋಪಿ ಶಿವಕುಮಾರ್ ಅರಸನ್‌ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು 15 ವರ್ಷಗ ಜೈಲು ಶಿಕ್ಷೆಗೆ ಇಳಿಸಿತ್ತು.

ಸುಬ್ರಮಣಿಯಂ ಹಾಗೂ ಪೆರುಮಾಳ್ ಅವರನ್ನು ಮರಣದಂಡನೆಯಿಂದ ಪಾರು ಮಾಡಲು ತುರ್ತಾಗಿ ಮಧ್ಯಪ್ರವೇಶಿಸುವಂತೆ ಕೋರಿ ತಮಿಳುನಾಡಿನ ಕಾಂಗ್ರೆಸ್ ಶಾಸಕ ಎಚ್.ವಸಂತ ಕುಮಾರ್ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದಿದ್ದರು. ಒಂದು ವೇಳೆ ಬಂಧಿತರನ್ನು ಬಿಡುಗಡೆಗೊಳಿಸದಿದ್ದಲ್ಲಿ ಮುಂಬೈನಲ್ಲಿರುವ ಕತರ್ ರಾಯಭಾರಿ ಕಚೇರಿಯ ಮುಂದೆ ಅನಿರ್ದಿಷ್ಟ ಮುಷ್ಕರ ನಡೆಸುವುದಾಗಿಯೂ ಅವರು ಬೆದರಿಕೆ ಹಾಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News