108 ಆರೋಗ್ಯ ರಕ್ಷಾ ಕವಚ ಆ್ಯಂಬುಲೆನ್ಸ್‌ನಲ್ಲಿ ಹೆರಿಗೆ

Update: 2017-01-09 18:30 GMT

ಪುತ್ತೂರು, ಜ.9: ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮೈಂಡನಡ್ಕದ ಮಹಿಳೆಯೊಬ್ಬರು ಪುತ್ತೂರಿನ 108 ಆರೋಗ್ಯ ರಕ್ಷಾ ಕವಚ ಆ್ಯಂಬುಲೆನ್ಸ್‌ನಲ್ಲಿಯೇ ಹೆಣ್ಣು ಶಿಶುವೊಂದಕ್ಕೆ ಜನ್ಮ ನೀಡಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಇದು 108 ಆರೋಗ್ಯ ರಕ್ಷಾ ಕವಚದಲ್ಲಿ ನಡೆದ 5ನೆ ಹೆರಿಗೆಯಾಗಿದ್ದು, ಸಿಬ್ಬಂದಿಯ ಕರ್ತವ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಬಡಗನ್ನೂರು ಗ್ರಾಮದ ಮೈಂದನಡ್ಕ ನಿವಾಸಿ ಮಂಜುಳಾ(26) ರಕ್ಷಾ ಕವಚದಲ್ಲಿ ಹೆರಿಗೆಯಾದ ಮಹಿಳೆ. ಮಂಜುಳಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದ ಸಂದರ್ಭ ಮನೆಯವರು 108 ಆರೋಗ್ಯ ರಕ್ಷಾ ಕವಚಕ್ಕೆ ದೂರವಾಣಿ ಕರೆ ಮಾಡಿದ್ದರು. ಆದರೆ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಮೈಂದನಡ್ಕದಿಂದ ಸುಳ್ಯ ಸರಕಾರಿ ಆಸ್ಪತ್ರೆಗೆ ಹೆರಿಗೆಗಾಗಿ ಕರೆದೊಯ್ಯುತ್ತಿದ್ದ ಸಂದರ್ಭ ಕಾವು ಸಮೀಪದ ಅಮ್ಚಿನಡ್ಕ ಎಂಬಲ್ಲಿ ಮಂಜುಳಾ ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದಾರೆ. ದಾರಿ ಮಧ್ಯೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದ ಮಂಜುಳಾಗೆ ಆ್ಯಂಬುಲೆನ್ಸ್ ನಲ್ಲಿಯೇ ಚಿಕಿತ್ಸೆ ನೀಡಿ 108 ಆರೋಗ್ಯ ರಕ್ಷಾ ಕವಚದ ಸ್ಟ್ಾ ನರ್ಸ್ ಆಗಿರುವ ಹಾಸನದ ಗಂಗರಾಜ್ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕರುಣಾಕರ್ ಚಂದಳಿಕೆ ಹೆರಿಗೆ ಮಾಡಿಸುವಲ್ಲಿ ಸಹಕರಿಸಿದ್ದರು. ಮಂಜುಳಾರ ಎರಡನೆ ಹೆರಿಗೆ ಇದಾಗಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದು, ಹೆರಿಗೆಯ ಬಳಿಕ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News