ಕಾಂಗ್ರೆಸ್ ಬೆಂಬಲಿತರಿಗೆ ಮತ ನೀಡಲು ಮನವಿ
ಮಂಗಳೂರು, ಜ.9: ಬಂಟ್ವಾಳ, ಪುತ್ತೂರು ಮತ್ತು ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಜ.12ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಲು ದ.ಕ. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ ಮನವಿ ಮಾಡಿದ್ದಾರೆ..
ಸೋಮವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಂಟ್ವಾಳದಲ್ಲಿ 13, ಬೆಳ್ತಂಗಡಿ ಮತ್ತು ಮಂಗಳೂರು ತಾಲೂಕಿನಲ್ಲಿ ತಲಾ 14 ನಿರ್ದೇಶಕ ಸ್ಥಾನಗಳಿವೆ. ಮೂರು ತಾಲೂಕುಗಳಲ್ಲಿ ತಲಾ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ ಸ್ಥಾನಗಳಿಗೆ ಜ.12ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4ಗಂಟೆವರೆಗೆ ಮತದಾನ ನಡೆಯಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಎಲ್ಲ ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ, ಅಡಿಕೆ ಕೊಳೆರೋಗಕ್ಕೆ ಪರಿಹಾರ, ಕೃಷಿಕರಿಗೆ ಉಚಿತ ಕೃಷಿ ಉಪಕರಣಗಳು, ಬಾಡಿಗೆಗೆ ಕೃಷಿ ಉಪಕರಣಗಳನ್ನು ಒದಗಿಸುವ ಮೂಲಕ ಬೆಂಬಲ ನೀಡಿದೆ. ಸರ್ವಋತು ಸಂಪರ್ಕ ರಸ್ತೆಗಳು, ಮಾರುಕಟ್ಟೆ ಪ್ರಾಂಗಣಗಳಿಗೆ ಆದ್ಯತೆ ನೀಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೇಯರ್ ಹರಿನಾಥ್, ಕಾಂಗ್ರೆಸ್ ಮುಖಂಡರಾದ ಪದ್ಮನಾಭ ನರಿಂಗಾನ, ಸದಾಶಿವ ಉಳ್ಳಾಲ, ಸಂತೋಷ್‌ಕುಮಾರ್ ಶೆಟ್ಟಿ, ಶಶಿಧರ ಹೆಗ್ಡೆ ಉಪಸ್ಥಿತರಿದ್ದರು.