×
Ad

ತಾಯಿಯ ಭೇಟಿ ಕುರಿತು ಪ್ರಧಾನಿ ಟ್ವೀಟ್ ಗೆ ಕೇಜ್ರಿವಾಲ್ ನೀಡಿದ ಈ ಪ್ರತಿಕ್ರಿಯೆಗೆ ನಿಮ್ಮ ಪ್ರತಿಕ್ರಿಯೆ ಏನು ?

Update: 2017-01-10 12:59 IST

ಗುಜರಾತ್, ಜ.10: ವೈಬ್ರೆಂಟ್ ಗುಜರಾತ್ ಸಮ್ಮಿಟ್ ನಲ್ಲಿ ಭಾಗವಹಿಸಲು ಗಾಂಧಿ ನಗರಕ್ಕೆ ಇಂದು ಬಂದಿರುವ ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ ತಮ್ಮ ತಾಯಿ ಹೀರಾಬಾ ಅವರನ್ನು ಕಾಣಲು ಸಮೀಪದ ರಾಯ್ಸನ್ ಗ್ರಾಮದಲ್ಲಿರುವ ತಮ್ಮ ಸಹೋದರ ಪಂಕಜ್ ಮೋದಿಯ ಮನೆಗೆ ತೆರಳಿ ತಾಯಿಯ ಕುಶಲೋಪರಿ ವಿಚಾರಿಸಿ ಅವರೊಂದಿಗಿನ ಬೆಳಗ್ಗಿನ ಉಪಾಹಾರ ಸ್ವೀಕರಿಸಿದರು.

97 ವರ್ಷದ ತಮ್ಮ ತಾಯಿಯ ಜತೆ ಸ್ವಲ್ಪ ಕಾಲ ಕಳೆದು ಅವರಿಂದ ಆಶೀರ್ವಾದ ಪಡೆದು ಅಲ್ಲಿಂದ ಮರಳಿ ಈ ಬಗ್ಗೆ ಟ್ವೀಟ್ ಮಾಡಿದ ಮೋದಿ ‘‘ಯೋಗ ಮಾಡುವುದನ್ನು ಬಿಟ್ಟು ತಾಯಿಯನ್ನು ನೋಡಲು ತೆರಳಿದೆ. ಬೆಳ್ಳಂಬೆಳಗ್ಗೆ ಅವರೊಂದಿಗೆ ಉಪಾಹಾರ ಸ್ವೀಕರಿಸಿದೆ. ಒಟ್ಟಿಗೆ ಸಮಯ ಕಳೆದು ಖುಷಿಯಾಯಿತು’’ ಎಂದು ಬರೆದಿದ್ದರು.

ಪ್ರಧಾನಿ ಮೋದಿಯ ಟ್ವೀಟಿಗೆ ಪ್ರತಿ ಟ್ವೀಟ್ ಮಾಡಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ‘‘ನಾನು ನನ್ನ ತಾಯಿಯೊಂದಿಗೆ ಇದ್ದೇನೆ ಹಾಗೂ ಪ್ರತಿದಿನ ಅವರಿಂದ ಆಶೀರ್ವಾದ ಪಡೆಯುತ್ತೇನೆ. ಆದರೆ ಇದನ್ನು ಟಾಂ ಟಾಂ ಮಾಡುವುದಿಲ್ಲ. ರಾಜಕೀಯಕ್ಕೋಸ್ಕರ ನಾನು ನನ್ನ ತಾಯಿಯನ್ನು ಬ್ಯಾಂಕಿನ ಸರತಿ ಸಾಲಿನಲ್ಲಿ ನಿಲ್ಲಿಸುವುದಿಲ್ಲ’’ ಎಂದು ಬರೆದಿದ್ದಾರೆ.

ಪ್ರಧಾನಿ ತಾಯಿ ಹಳೆ ನೋಟುಗಳನ್ನು ವಿನಿಮಯ ಮಾಡಲು ಬ್ಯಾಂಕಿನ ಸರತಿ ಸಾಲಿನಲ್ಲಿ ಕೆಲ ದಿನಗಳ ಹಿಂದೆ ನಿಂತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ ನಂತರ ಈ ಬಗ್ಗೆಯೂ ಟ್ವೀಟ್ ಮಾಡಿದ್ದ ಕೇಜ್ರಿವಾಲ್ ‘‘ತಾವು ಈ ರೀತಿ ಖಂಡಿತ ಮಾಡುತ್ತಿರಲಿಲ್ಲ’’ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News