×
Ad

ಪಡುಮಲೆ ಅಭಿವೃದ್ಧಿ ಕಾರ್ಯ ತ್ವರಿತಗೊಳಿಸಲು ಸಚಿವ ರೈ ಆದೇಶ

Update: 2017-01-10 16:15 IST

ಪುತ್ತೂರು, ಜ.10: ಪಡುಮಲೆ ಎಂಬುದು ವಿಶಾಲ ಪ್ರದೇಶವಾಗಿದ್ದು, ಇಲ್ಲಿ ಕೋಟಿ ಚೆನ್ನಯರ ಕಾಲಘಟ್ಟದ ನಾನಾ ಕುರುಹುಗಳಿವೆ. ಈ ಎಲ್ಲ ಭಾಗಗಳು ಅಭಿವೃದ್ಧಿ ಆಗಬೇಕಾದರೆ ಎಲ್ಲೆಲ್ಲಿ ಏನೇನು ಆಗಬೇಕು ಮತ್ತು ಅದಕ್ಕೆ ಎಷ್ಟು ಅನುದಾನ ಬೇಕು ಎಂಬುದರ ಸ್ಪಷ್ಟ ಚಿತ್ರಣ ಬೇಕಾಗಿದೆ. ಇದಕ್ಕಾಗಿ ಎ.ಸಿ. ನೇತೃತ್ವದಲ್ಲಿ ತಕ್ಷಣದಲ್ಲೇ ಸ್ಥಳೀಯ ಶಾಸಕರ ಉಪಸ್ಥಿತಿಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಬೇಕು. ಇದಾದ ಬಳಿಕ ಜ.16ರಂದು ಅಭಿವೃದ್ಧಿ ಸಮಿತಿಯ ಸಭೆ ನಡೆದು ಯೋಜನೆಗಳನ್ನು ಅಂತಿಮಗೊಳಿಸಿ ಕಾರ್ಯರೂಪಕ್ಕೆ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಪುತ್ತೂರು ಮಿನಿ ವಿಧಾನಸೌಧದ ತಹಶೀಲ್ದಾರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಪಡುಮಲೆ ಅಭಿವೃದ್ಧಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಧಾರ್ಮಿಕ ಮತ್ತು ದತ್ತಿ ಇಲಾಖೆಯಲ್ಲಿ ಸಹಾಯಕ ಆಯುಕ್ತೆ ಪ್ರಮೀಳಾರಿಗೆ ಪಡುಮಲೆ ಯೋಜನೆಯ ಉಸ್ತುವಾರಿ ವಹಿಸಲಾಗಿದೆ. ಅವರಿಗೆ ಎಲ್ಲ ವಿವರಗಳ ವರದಿ ಸಲ್ಲಿಸಿ ಎಂದು ಸಚಿವರು ನಿರ್ದೇಶನ ನೀಡಿದರು.

ಪಡುಮಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿ ಸರಕಾರದಿಂದ ಬಿಡುಗಡೆಯಾದ ಐದು ಕೋಟಿ ರೂ. ಅನುದಾನದಲ್ಲಿ ಕಾಮಗಾರಿಗಳು ಕುಂಟುತ್ತಾ ನಡೆಯುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ತ್ವರಿತವಾಗಿ ಅನುಷ್ಠಾನಗೊಳಿಸಲು ಸೂಚನೆ ನೀಡಿದರು.

ನಿವೃತ್ತ ಶಿಕ್ಷಕ ಕೆ.ಸಿ. ಪಾಟಾಳಿ ಪಡುಮಲೆ ಮಾತನಾಡಿ, ಪಡುಮಲೆ ಅಭಿವೃದ್ಧಿ ನಕಾಶೆ ಮತ್ತಿತರ ಯೋಜನೆಗಳು ಆಗಾಗ ಬದಲಾವಣೆ ಆಗುತ್ತಿರುವುದು ಸರಿಯಲ್ಲ. 2013ರ ಬಜೆಟ್‌ನಲ್ಲಿ ಐದು ಕೋಟಿ ಮಂಜೂರಾಗಿದ್ದರೂ ಇನ್ನೂ ಕಾಮಗಾರಿ ಚುರುಕುಗೊಂಡಿಲ್ಲ. ಶಂಖಪಾಲ ಬೆಟ್ಟದ ತಪ್ಪಲಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಿದೆ. ಇದರ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು ಈ ಹಿಂದಿನ ವಿಚಾರಗಳ ಬಗ್ಗೆ ಚರ್ಚೆ ಬೇಡ. ಮುಂದೆ ಹೇಗೆ ಮಾಡೋಣ ಎಂಬುದರ ಚರ್ಚಿಸೋಣ ಎಂದರು. ಕಾಮಗಾರಿಗಳ ಉಸ್ತುವಾರಿ ಹೊತ್ತಿರುವ ಮಂಗಳೂರು ನಿರ್ಮಿತಿ ಕೇಂದ್ರದ ಪ್ರತಿನಿಧಿ ಹರೀಶ್ ಮಾತನಾಡಿ, ಯೋಜನೆಯ ರೂಪುರೇಷೆಗಳ ವಿವರ ನೀಡಿದರು.

ಶಂಖಪಾಲ ಬೆಟ್ಟದಲ್ಲಿ ನಡೆಯುತ್ತಿರುವ ಸಮುದಾಯ ಭವನ, ಅಲ್ಲಿ ನಡೆಯಬೇಕಾದ ಗ್ಯಾಲರಿ ಮೆಟ್ಟಿಲುಗಳು, ಶೌಚಾಲಯ, ನೀರಿನ ವ್ಯವಸ್ಥೆ ಇತ್ಯಾದಿಗಳ ಅವಲೋಕನ ಮಾಡಲಾಯಿತು. ಸಾಯನ ಬೈದ್ಯರು, ದೇಯಿ ಬೈದೆತಿ ಮತ್ತು ಕೋಟಿ-ಚೆನ್ನಯರ ಮೂಲಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ನಡೆಯಬೇಕಾದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯಿತು. ಗೆಜ್ಜೆಗಿರಿಯಲ್ಲಿ ಪ್ರತ್ಯೇಕ ಸಮಿತಿ ರಚಿಸಿ ಆರಾಧನಾ ಕೇಂದ್ರ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದರು.

ಬಲ್ಲಾಳರ ಬೀಡಿನ ಅಭಿವೃದ್ಧಿ ಬಗ್ಗೆ ಅವಲೋಕಿಸಲಾಯಿತು. ಆ ಜಾಗದ ತಕರಾರು ನ್ಯಾಯಾಲಯದಲ್ಲಿ ಇರುವಾಗ ಅಲ್ಲಿಗೆ ಹೇಗೆ ಅನುದಾನ ನೀಡಲು ಸಾಧ್ಯ ಎಂಬ ಪ್ರಶ್ನೆ ಸಭೆಯಲ್ಲಿ ಚರ್ಚೆಗೆ ಬಂತು. ಈ ಬಗ್ಗೆ ಪರಿಶೀಲಿಸಲು ನಿರ್ಧರಿಸಲಾಯಿತು. ಮಂತ್ರಿ ಮಲ್ಲಯ್ಯ ಬುದ್ಧಿವಂತ ವಾಸವಾಗಿದ್ದ ಮನೆಯ ಪ್ರದೇಶ, ಸ್ವರ್ಣ ಕೇದಗೆ ಕೆಲ ಕಾಲ ಜೀವಿಸಿದ್ದ ಕೂವೆತೋಟ ಮನೆ ಇವುಗಳ ಅಭಿವೃದ್ಧಿ ಹೇಗೆ ಮಾಡಬಹುದು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಯಿತು.

ಕಿನ್ನಿಮಾಣಿ - ಪೂಮಾಣಿ ದೈವಸ್ಥಾನದ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು. ಪ್ರಮುಖ ಸ್ಥಳಗಳಲ್ಲಿ ಬೋರ್ಡ್ ಅಳವಡಿಸಲು, ಸ್ವಾಗತ ಕಮಾನು ನಿರ್ಮಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಸಹಾಯಕ ಆಯುಕ್ತ ಡಾ.ರಘುನಂದನ ಮೂರ್ತಿ, ತಹಶೀಲ್ದಾರ್ ಅನಂತ ಶಂಕರ್, ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾಪಂ ಸದಸ್ಯ ರಾಧಾಕೃಷ್ಣ ಬೋರ್ಕರ್, ಬಡಗನ್ನೂರು ಗ್ರಾಪಂ ಅಧ್ಯಕ್ಷ ಕೇಶವ ಗೌಡ, ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸಂಜೀವ ರೈ ಕೆ.ಪಿ., ದೇಯಿ ಬೈದೆತಿ, ಕೋಟಿ-ಚೆನ್ನಯ ಮೂಲಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನ ಆನುವಂಶಿಕ ಮೊಕ್ತಸರ ಶ್ರೀಧರ ಪೂಜಾರಿ, ಗ್ರಾಪಂ ಸದಸ್ಯ ಗುರುಪ್ರಸಾದ್ ರೈ, ಮುಖಂಡರಾದ ಜಯರಾಜ ಶೆಟ್ಟಿ ಅಣಿಲೆ, ಕುದ್ಕಾಡಿ ಬಾಲಕೃಷ್ಣ ರೈ, ಉಲ್ಲಾಸ್ ಕೋಟ್ಯಾನ್, ವೇದನಾಥ ಸುವರ್ಣ, ಶ್ರೀರಾಮ ಪಕ್ಕಳ, ಮಹೇಶ್ ರೈ ಅಂಕೊತ್ತಿಮಾರ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News