ಪಡುಪಣಂಬೂರು ಗ್ರಾಮ ಪಂಚಾಯತ್ ಗ್ರಾಮ ಸಭೆ
ಮುಲ್ಕಿ, ಜ.10: ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 2016 -17ನೆ ಸಾಲಿನ ಎರಡನೇ ಹಂತದ ಗ್ರಾಮ ಸಭೆಯು ಕಲ್ಲಾಪು ಶ್ರೀ ವೀರಭದ್ರ ಮಹಾಮ್ಮಹಿ ದೇವಸ್ಥಾನದ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶ್ಯಾಮಲಾ ಸಿ.ಕೆ. ಅವರ ಅಧಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಕಳೆದ ಹಲವು ಗ್ರಾಮಸಭೆಗೆ ಆಹಾರ ಇಲಾಖೆಯ ಅಧಿಕಾರಿಗಳು ಗೈರಾಗುತ್ತಿದ್ದು, ಗ್ರಾಮಸ್ಥರ ಸಮಸ್ಯೆಗಳನ್ನು ಕೇಳುವವರಿಲ್ಲದಂತಾಗಿದೆ ಎಂದು ಸಭೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಉತ್ತರಿಸಿದ ಆಹಾರ ಇಲಾಖಾಯ ಅಧಿಕಾರಿ ವಾಸು ಶೆಟ್ಟಿ, ಆಹಾರ ಇಲಾಕೆಯಲ್ಲಿ ಅಧಿಕಾರಿಗಳ ಕೊರತೆ ಇದೆ. ಇದರಿಂದಾಗಿ ಸಭೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಪಡುಪಣಂಬೂರು ಗ್ರಾಮ ಪಂಚಾಯತ್‌ನ ಅಧಿಕಾರಿಗಳು ಒತ್ತಾಯ ಮಾಡಿದ ಕಾರಣ ಈ ಸಭೆಗೆ ಹಾಜರಾಗಿದ್ದೇನೆ ಎಂದರು.
ಬಳಿಕ ಮಾತನಾಡಿದ ಗ್ರಾಮಸ್ಥರೊಬ್ಬರು, ಉಡುಪಿಯಿಂದ ಕಳೆದ 6 ವರ್ಷಗಳ ಹಿಂದೆ ನಾನು ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಾಗಿದ್ದೇನೆ. ಆದರೆ, ಈವರೆಗೂ ನನ್ನ ಪಡಿತರ ಚೀಟಿ ವರ್ಗಾವಣೆ ಯಾಗಿಲ್ಲ. ಈ ಬಗ್ಗೆ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಕಲೆದ 6 ವರ್ಷಗಳಿಂದ ಸುತ್ತಾಡಿ ಸುಸ್ತಾಗಿದೆ. ಮುಂದೇನು ಎಂದು ತೋಚುತ್ತಿಲ್ಲ. ವಿಚಾರಿಸಲು ಎಲ್ಲಾ ಗ್ರಾಮ ಸಭೆಗಳಿಗೆ ಹಾಜರಾದರೂ ಅಧಿಕಾರಿಗಳ ಗೈರಿನಿಂದಾಗಿ ಮಾಹಿತಿ ದೊರೆಯುತ್ತಿಲ್ಲ ಎಂದು ದೂರಿದರು.
ಆ ವೇಳೆ ಮಾತನಾಡಿದ ಆಹಾರ ಇಲಾಖಾಧಿಕಾರಿ ವಾಸು ಶೆಟ್ಟಿ, ಮಂಗಳೂರು ಕಚೇರಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು.
ಪಡಿತರ ಪಡೆಯಲು ತೆರಳಿದರೆ ಪಡಿತರ ಕಾರ್ಡ್ ರದ್ದಾಗಿದೆ ಎನ್ನುತ್ತಾರೆ. ಹೊಸ ಕಾರ್ಡ್ ಯಾವಾಗ ಬರುವುದು ಎಂಬ ಮಾಹಿತಿಯೂ ನೀಡುತ್ತಿಲ್ಲ. ಅಲ್ಲದೆ, ಪಡುಪಣಂಬೂರು ಪಂಚಾಯತ್ ವ್ಯಾಪ್ತಿಯಲ್ಲಿ ಪಡಿತರ ಅಂಗಡಿಯೂ ಇಲ್ಲ ಎಂದು ಗ್ರಾಮಸ್ಥರೊಬ್ಬರು ಅಧಿಕಾರಿಯನ್ನು ಪ್ರಶ್ನಿಸಿದರು.
ಸಮಸ್ಯೆಗೆ ಉತ್ತರಿಸಿದ ಆಹಾರ ಇಲಾಖಾಧಿಕಾರಿ ವಾಸು ಶೆಟ್ಟಿ ಮಾತನಾಡಿ, ಇಂತಹ ಕೇಂದ್ರ ಸ್ಥಾಪನೆಗೆ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು ಅಥವಾ ಗ್ರಾಮ ಪಂಚಾಯಿತಿಗಳು ಆಸಕ್ತಿ ವಹಿಸಿದಲ್ಲಿ ಪಡಿತರ ವಿತರಣಾ ಕೇಂದ್ರದ ಏಜೆನ್ಸಿಯನ್ನು ನೀಡುವ ಅವಕಾಶ ಇದೆ. 2015 ರ ಮೊದಲು ರೇಶನ್ ಕಾರ್ಡ್ ಮಾಡಿಸಲು ಮತದಾರರ ಗುರುತು ಚೀಟಿ ಕಡ್ಡಾಯವಾಗಿದ್ದು , ಇದೀಗ ಹತ್ತು ತಿಂಗಳಿನಿಂದ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಹೊಸ ಎಪಿಲ್ ಕಾರ್ಡುಗಳನ್ನು ಆನ್‌ಲೈನ್‌ನಲ್ಲಿ ಮಾಡಲಾಗುವುದು ಎಂದರು.
ಉಜಾಲ ಯೋಜನೆಯಲ್ಲಿ ಎಸ್ಸಿ-ಎಸ್ಟಿ ಫಲಾನುಭವಿಗಳಿಗೆ ಗ್ಯಾಸ್ ವಿತರಣೆಯ ಮಾನದಂಡಗಳು ಮತ್ತು ಫಲಾನುಭವಿಗಳ ಆಯ್ಕೆಯ ಬಗ್ಗೆ ಗ್ರಾಮಸ್ಥರೊಬ್ಬರ ಪ್ರಶ್ನೆಗೆ ಉತ್ತರಿಸಿದ ಪಂಚಾಯತ್ ಅಧಿಕಾರಿಗಳು, ಬಿಪಿಎಲ್ ಕಾರ್ಡ್‌ಹೊಂದಿದವರಿಗೆ ಮಾತ್ರ ಈ ಯೋಜನೆಯ ಫಲಾನುಭವಿಗಳಾಗಬಹುದು. ನಮ್ಮ ಪಂಚಾಯತ್‌ನಲ್ಲಿ 41 ರ್ಜಿಗಳು ಯೋಜನೆಗೆ ಅರ್ಜಿಗಳು ಬಂದಿದ್ದವು. ಅದರಲ್ಲಿ ಬೆಳ್ಳಾಯರಿನ ಓರ್ವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಮತ್ತು 40 ಮಂದಿಗೆ ಯೋಜನೆಯ ಗ್ಯಾಸ್‌ವಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಸ್ಸಿ-ಎಸ್ಟಿಗಳಿಗೆ ಅಗತ್ಯವಗಿ ಬೇಕಾಗಿರುವ ಶೌಚಾಲಯ ನಿರ್ಮಾಣಕ್ಕೆ ಪಂಚಾಯತ್ ಆದ್ಯತೆ ನೀಡುತ್ತಿಲ್ಲ. ಸರಕಾರದ ಅನುದಾನಗಳನ್ನು ಅನಗತ್ಯವಾಗಿ ಬಳಕೆ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಒಟ್ಟಾರೆಯಾಗಿ ಪಡುಪಣಂಬೂರು ಗ್ರಾಮ ಪಂಚಾಯತ್‌ನ ಎರಡನೇ ಹಂತದ ಗ್ರಾಮ ಸಭೆ ಉಜಾಲ ಗ್ಯಾಸ್ ಸಂಪರ್ಕ ಯೋಜನೆಯಲ್ಲಿ ಫಲಾನುವಿಗಳ ಆಯ್ಕೆ ಗೊಂದಲ, ಎಪಿಎಲ್-ಬಿಪಿಎಲ್ ಕಾರ್ಡ್‌ಗಳ ಗೊಂದಲ, ಕೃಷಿ ಬಿತ್ತನೆ ಬೀಜದ ಕೊರತೆ, ವಿದ್ಯುತ್ ಕಡಿತ, ಕೆರೆಕಾಡಿನ ರಸ್ತೆ ಬದಿಯಲ್ಲಿನ ಮರದ ರೆಂಬೆಗಳನ್ನು ಕಡಿದು ರಸ್ತೆಗೆ ಎಸೆಯುವ ಮೆಸ್ಕಾಂ ಇಲಾಖೆ, ಕಂಬಳಬೆಟ್ಟು, ತೋಕೂರು, ಪಲ್ಲಿಗುಡ್ಡೆಯಲ್ಲಿ ಅಕ್ರಮ ಚಟುವಟಿಕೆ, ರಸ್ತೆ ಬದಿಯ ಚರಂಡಿ ಮುಚ್ಚಿರುವುದು, ಕೆರೆಕಾಡು ಜಳಕದ ಕೆರೆ ಸಂಪರ್ಕದ ರಸ್ತೆಗೆ ಡಾಮರೀಕರಣ ಇನ್ನಿತರ ವಿಷಯಗಳ ಬಗ್ಗೆ ಸಬೆಯಲ್ಲಿ ಚರ್ಚೆ ನಡೆದು ಗ್ರಾಮಸ್ಥರು ಅಧಿಕಾರಿಗಳನ್ನು ತಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ದಾಸ್, ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್, ತಾ. ಪಂಚಾಯತ್ ಸದಸ್ಯರಾದ ಶರತ್ ಕುಬೆವೂರು, ಜೀವನ್ ಪ್ರಕಾಶ್,ದಿವಾಕರ, ಪಂಚಾಯತ್ ಪಿಡಿಒ ಅನಿತಾ ಕ್ಯಾಥರಿನ್, ಪೊಲೀಸ್ ಅಧಿಕಾರಿ ಶಾಂತಪ್ಪ, ವೈದ್ಯಾಧಿಕಾರಿ ಡಾ. ಮಾಧವ ಲೋಕನಾಥ ಭಂಡಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.