ಛತ್ತೀಸ್‌ಗಡ : ಗುಂಡಿನ ಚಕಮಕಿ ಓರ್ವ ಪೊಲೀಸ್, ನಾಲ್ವರು ನಕ್ಸಲರು ಬಲಿ
ರಾಯ್‌ಪುರ, ಜ.10: ಛತ್ತೀಸ್‌ಗಡದ ನಕ್ಸಲ್ ಪೀಡಿತ ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲರು ಮತ್ತು ಪೊಲೀಸರ ಮಧ್ಯೆ ನಡೆದ ಭಾರೀ ಗುಂಡಿನ ಕಾಳಗದಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದು, ಮಹಿಳೆಯೂ ಸೇರಿದಂತೆ ನಾಲ್ವರು ನಕ್ಸಲರು ಬಲಿಯಾಗಿದ್ದಾರೆ. ಛೋಟೆದೊಂಗಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯದಲ್ಲಿ ಈ ಘಟನೆ ನಡೆದಿದೆ.
ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯ ಪಡೆ ಮತ್ತು ಸ್ಥಳೀಯ ಪೊಲೀಸರು ಸೇರಿಕೊಂಡು ನಕ್ಸಲರ ಅಡಗುದಾಣ ಎಂದೇ ಕರೆಸಿಕೊಳ್ಳುವ ಈ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಅರಣ್ಯ ಪ್ರದೇಶವನ್ನು ಸುತ್ತುವರಿಯಲು ಮುಂದಾಗುತ್ತಿದ್ದಂತೆಯೇ ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು ಪ್ರತಿಯಾಗಿ ಭದ್ರತಾ ಪಡೆಯವರೂ ಗುಂಡಿನ ದಾಳಿ ನಡೆಸಿದರು. ನಕ್ಸಲರು ಹಾರಿಸಿದ ಗುಂಡಿಗೆ ಜಿಲ್ಲಾ ಮೀಸಲು ಪಡೆಯ ಹೆಡ್‌ಕಾನ್‌ಸ್ಟೆಬಲ್ ಭುವನೇಶ್ವರ್ ಮಂಡವಿ ಬಲಿಯಾದರು. ಬಳಿಕ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ ಓರ್ವ ಮಹಿಳೆ ಸಹಿತ ನಾಲ್ವರು ನಕ್ಸಲರ ಮೃತದೇಹ ಮತ್ತು ಕೆಲವು ವಸ್ತುಗಳು ಪತ್ತೆಯಾದವು. ಅಲ್ಲದೆ ನಕ್ಸಲರು ಅರಣ್ಯದೊಳಗೆ ಹುದುಗಿಸಿಟ್ಟ 9 ಸುಧಾರಿತ ಸ್ಫೋಟಕ ಸಾಧನಗಳನ್ನೂ ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.