ಸುಳ್ಯ ಚೆನ್ನಕೇಶವನಿಗೆ ಜಾತ್ರೋತ್ಸವ ಸಂಭ್ರಮ
ಸುಳ್ಯ , ಜ.10 : ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಅಂಗವಾಗಿ ದೊಡ್ಡ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು.
ಸೋಮವಾರ ರಾತ್ರಿ ಮಿತ್ತೂರು ಹಾಗೂ ಕಾನತ್ತಿಲ ದೈವಗಳ ಭಂಡಾರ ಬಂದು ವಾಲಸಿರಿ ಉತ್ಸವ ನಡೆಯಿತು.
ದೇವಸ್ಥಾನದ ತಂತ್ರಿ ದೇಲಂಪಾಡಿ ಬಾಲಕೃಷ್ಣ ತಂತ್ರಿ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ನಡೆದವು.
ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಸಮಿತಿ ಸದಸ್ಯರಾದ ಪಡ್ಡಂಬೈಲು ವೆಂಕಟ್ರಮಣ ಗೌಡ, ಲಿಂಗಪ್ಪ ಗೌಡ ಕೇರ್ಪಳ, ಕೆ.ಉಪೇಂದ್ರ ಕಾಮತ್, ಎಂ.ಮೀನಾಕ್ಷಿ ಗೌಡ, ಎನ್.ಎ.ರಾಮಚಂದ್ರ, ಎನ್.ಜಯಪ್ರಕಾಶ್ ರೈ, ರಮೇಶ್ ಬೈಪಾಡಿತ್ತಾಯ, ಎಒಎಲ್‌ಇ ನಿರ್ದೇಶಕರಾದ ಶೋಭಾ ಚಿದಾನಂದ, ಅಕ್ಷಯ್ ಕುರುಂಜಿ, , ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು, ತಹಸೀಲ್ದಾರ್ ಎಂ.ಎಂ.ಗಣೇಶ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಕೃಪಾಶಂಕರ ತುದಿಯಡ್ಕ, ಗಿರಿಜಾ ಶಂಕರ ತುದಿಯಡ್ಕ ಮೊದಲಾದ ಗಣ್ಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಉತ್ಸವದಲ್ಲಿ ಪಾಲ್ಗೊಂಡರು.
ಸುಳ್ಯ ಜಾತ್ರೋತ್ಸವ ಸಂದರ್ಭ ಚೊಕ್ಕಾಡಿಯ ಸತ್ಯಸಾಯಿ ಬಳಗ ಹಾಗೂ ಸುಳ್ಯದ ಶಿವಳ್ಳಿ ಸಂಪನ್ನದ ವತಿಯಿಂದ ಭಕ್ತರಿಗೆ ಉಚಿತ ಮಜ್ಜಿಗೆ, ಪಾನೀಯ ವಿತರಣೆ ನಡೆಯಿತು.
ದೇವಸ್ಥಾನದ ರಾಜಗೋಪುರದ ಎಡಬದಿಯಲ್ಲಿ ಸತ್ಯಸಾಯಿ ಬಳಗದವರು ಮಜ್ಜಿಗೆ ವಿತರಿಸಿದರು , ಸ್ವಾತಿಸಿಟಿ ಲಾಡ್ಜ್‌ನ ಎದುರು ಶಿವಳ್ಳಿ ಸಂಪನ್ನದಿಂದ ಮಜ್ಜಿಗೆ ಹಾಗು ಶರಬತ್ ವಿತರಣೆ ನಡೆಯಿತು.
ಸಾವಿರಾರು ಭಕ್ತರು ಉಚಿತ ಪಾನೀಯವನ್ನು ಸ್ವೀಕರಿಸಿದರು.
ದೇವಸ್ಥಾನದ ಎದುರಿನ ಹೈಮಾಸ್ಟ್ ಬೀದಿದೀಪದ ಬಳಿ ವ್ಯಕ್ತಿಯೊಬ್ಬರು ಗಾಂಧೀಜಿಯ ಪ್ರತಿಮೆಯಂತೆ ನಿಂತಿದ್ದರು.
ಅಡಿಕೆ ಧಾರಣೆ ಕುಸಿತ ಹಾಗೂ ಚಿಲ್ಲರೆ ಸಮಸ್ಯೆ ಇದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಜನರು ಜಾತ್ರೋತ್ಸವದಲ್ಲಿ ಪಾಲ್ಗೊಂಡರು.
ವರ್ಷದಂತೆ ಸಾಕಷ್ಟು ಸಂಖ್ಯೆಯಲ್ಲಿ ಸಂತೆ ಅಂಗಡಿಗಳು ಇದ್ದವು. ವಿಶೇಷ ಅಮ್ಯೂಸ್‌ಮೆಂಟ್ ಪಾರ್ಕ್ ಕೂಡಾ ಜಾತ್ರೆಗೆ ಹೊಸ ಮೆರುಗು ತಂದಿತ್ತು.