ನೋಟು ನಿಷೇಧ ಬಳಿಕ 4 ಲಕ್ಷ ಕೋಟಿ ರೂ. ಕಪ್ಪು ಹಣ ಬ್ಯಾಂಕ್‌ಗಳಲ್ಲಿ ಠೇವಣಿ : ಆದಾಯ ಇಲಾಖೆ ವರದಿ ಬಹಿರಂಗ
ಹೊಸದಿಲ್ಲಿ,ಜ.10: ಅಮಾನ್ಯಗೊಂಡ 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂತಿರುಗಿಸಲು ನೀಡಲಾಗಿದ್ದ 50 ದಿನಗಳ ಕಾಲಾವಧಿಯಲ್ಲಿ 3ರಿಂದ 4 ಕೋಟಿ ರೂ.ಗಳಷ್ಟು ಕಪ್ಪುಹಣವನ್ನು ಬ್ಯಾಂಕ್‌ಗಳಲ್ಲಿ ಠೇವಣಿಯಿರಿಸಿರುವ ಸಾಧ್ಯತೆಯಿದೆಯೆಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಬಹಿರಂಗಪಡಿಸಿದ್ದಾರೆ.
ತೆರಿಗೆ ವಂಚನೆಯ ಸಾಧ್ಯತೆಯಿರುವ ಈ 3-4 ಲಕ್ಷ ಕೋಟಿ ರೂ.ಗಳ ಠೇವಣಿದಾರರ ಬಗ್ಗೆ ವಿವರಗಳನ್ನು ಸಂಗ್ರಹಿಸುವಂತೆ ಮತ್ತು ಅವರಿಗೆ ನೋಟಿಸ್‌ಗಳನ್ನು ಕಳುಹಿಸುವಂತೆ ಆದಾಯ ತೆರಿಗೆ ಇಲಾಖೆಯು ಸೂಚನೆ ನೀಡಿದೆಯೆಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘‘ನೋಟು ನಿಷೇಧದ ಬಳಿಕ 60 ಲಕ್ಷಕ್ಕೂ ಅಧಿಕ ಬ್ಯಾಂಕ್ ಖಾತೆಗಳಲ್ಲಿ 2 ಲಕ್ಷ ರೂ.ಗೂ ಅಧಿಕ ಹಣವನ್ನು ಠೇವಣಿಯಿರಿಸಿರುವುದನ್ನು ತೋರಿಸುವ ಅಪಾರ ದತ್ತಾಂಶಗಳು, ವಿಶ್ಲೇಷಣಾ ವರದಿಗಳು ನಮ್ಮಲ್ಲಿವೆ. ಈ ಖಾತೆಗಳಲ್ಲಿರುವ ಠೇವಣಿಗಳ ಒಟ್ಟು ಮೊತ್ತ 7.34 ಲಕ್ಷ ರೂ.ಗೂ ಅಧಿಕ’’ವೆಂದು ಅವರು ಹೇಳಿದ್ದಾರೆ.
ನವೆಂಬರ್ 9ರಿಂದ ಈಶಾನ್ಯ ಭಾರತದ ರಾಜ್ಯಗಳಲ್ಲಿ 10,700 ಕೋಟಿ ರೂ. ನಗದನ್ನು ಠೇವಣಿಯಿರಿಸಲಾಗಿದೆಯೆಂದವರು ಬಹಿರಂಗಪಡಿಸಿದ್ದಾರೆ. ಸಹಕಾರಿ ಬ್ಯಾಂಕ್‌ಗಳ ವಿವಿಧ ಖಾತೆಗಳಲ್ಲಿ ಠೇವಣಿಯಿಡಲಾಗಿರುವ 16 ಸಾವಿರ ಕೋಟಿ ರೂ.ಗಳ ಕುರಿತು ಜಾರಿ ನಿರ್ದೇಶನಾಲಯವು ತಪಾಸಣೆ ನಡೆಸುತ್ತಿದೆಯೆಂದು ಅವರು ಹೇಳಿದ್ದಾರೆ.
ನವೆಂಬರ್ 8ರಿಂದೀಚೆಗೆ 25 ಸಾವಿರ ಕೋಟಿ ರೂ. ನಗದನ್ನು ಬ್ಯಾಂಕ್‌ಗಳಲ್ಲಿ ನಿಷ್ಕ್ರಿಯವಾಗಿದ್ದ ಖಾತೆಗಳಲ್ಲಿ ಠೇವಣಿಯಿರಿಸಲಾಗಿದೆ. ಇದೇ ಅವಧಿಯಲ್ಲಿ 80 ಸಾವಿರ ಕೋಟಿ ರೂ.ಗಳನ್ನು ಸಾಲ ನಗದುರೂಪದಲ್ಲಿ ಮರುಪಾವತಿಯಾಗಿದೆಯೆಂದು ಅಧಿಕಾರಿ ತಿಳಿಸಿದ್ದಾರೆ.
ಅಳವಾದ ವಿಶ್ಲೇಷಣೆಯ ಬಳಿಕ ಈ ಅಂಕಿಅಂಶಗಳನ್ನು ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಇತರ ಕಾನೂನು ಅನುಷ್ಠಾನ ಸಂಸ್ಥೆಗಳಿಗೆ ಸಲ್ಲಿಸಲಾಗುವುದು ಎಂದವರು ಹೇಳಿದ್ದಾರೆ. ನೋಟು ಅಮಾನ್ಯತೆಯ ಬಳಿಕ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಠೇವಣಿಯಿರಿಸಲಾದ 13 ಸಾವಿರ ಕೋಟಿ ರೂ.ಗಳ ಕುರಿತಾದ ವಿವರಗಳನ್ನು ಕೂಡಾ ಈ ಇಲಾಖೆಗಳಿಗೆ ಕಳುಹಿಸಿಕೊಡಲಾಗುವುದೆಂದು ಅವರು ಹೇಳಿದ್ದಾರೆ.
ಭಯೋತ್ಪಾದನೆ ಪೀಡಿತ ರಾಜ್ಯಗಳಲ್ಲಿನ ನಗದು ಠೇವಣಿಗಳ ಕುರಿತ ವಿವರಗಳನ್ನು ಕೂಡಾ ಕಾನೂನು ಜಾರಿ ಸಂಸ್ಥೆಗಳಿಗೆ ಕಳುಹಿಸಿಕೊಡಲಾಗುವುದು ಹಾಗೂ ಇಂತಹ ಪ್ರಕರಣಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದವರು ಹೇಳಿದ್ದಾರೆ.