ಮತ್ತೆ ಸುದ್ದಿಯಲ್ಲಿ ಸುಷ್ಮಾ : ಫ್ರಾನ್ಸ್ ನಲ್ಲಿ ಅತಂತ್ರರಾಗಿದ್ದ ವೃದ್ಧ ದಂಪತಿಗೆ ಆಸರೆಯಾದ ವಿದೇಶಾಂಗ ಸಚಿವೆ
ಹೊಸದಿಲ್ಲಿ, ಜ.10: ತಾನೋರ್ವ ಜನಪರ ಸಚಿವೆಯೆಂಬ ಹೆಗ್ಗಳಿಕೆಯನ್ನು ಮತ್ತೊಮ್ಮೆ ಸಾಬೀತುಪಡಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತೊಮ್ಮೆ ವಿದೇಶದಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದವರ ನೆರವಿಗೆ ಬಂದಿದ್ದಾರೆ. ಈ ಬಾರಿ ಅವರು ಫ್ರಾನ್ಸ್‌ನಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ವೃದ್ಧದಂಪತಿಗೆೆ ಅವರು ಸಹಾಯ ಹಸ್ತ ಚಾಚಿದ್ದಾರೆ.
ವಯೋವೃದ್ಧ ಶಿವಚರಣ್ ಗೀಯಾ ಎಂಬವರು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿದ್ದ ವಿಡಿಯೋದಲ್ಲಿ ತಾನು ಹಾಗೂ ಪತ್ನಿಯು ಫ್ರಾನ್ಸ್‌ನಲ್ಲಿ ಎದುರಿಸುತ್ತಿರುವ ಬವಣೆಗಳನ್ನು ಹಂಚಿಕೊಂಡಿದ್ದರು. ಕಳೆದ ನಾಲ್ಕು ವರ್ಷಗಳಿಂದ ತಾನು ಫ್ರಾನ್ಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದು ಅಲ್ಲಿ ತನ್ನ ಸ್ಥಿತಿ ಅತ್ಯಂತ ದಯನೀಯವಾಗಿದೆ ಎಂದವರು ಹೇಳಿದ್ದರು. ತನಗೆ ಎರಡು ಹೃದಯ ಶಸ್ತ್ರಕ್ರಿಯೆಗಳಾಗಿದ್ದು, ತಾನು ಮಧುಮೇಹ ರೋಗಿಯೆಂದು ಅವರು ಹೇಳಿದ್ದರು. 2013ರಲ್ಲಿಯೇ ಭಾರತಕ್ಕೆ ವಾಪಸಾಗಲು ತಾನು ಪ್ರಯತ್ನಿಸಿದ್ದೆ. ಆದರೆ ಅದಕ್ಕೂ ಮೊದಲು ತಾನು ಲಿಂಫೊಮಾ ಕ್ಯಾನ್ಸರ್ ಪೀಡಿತನಾಗಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿತ್ತು. ತೀವ್ರ ರೋಗದಿಂದ ನರಳುತ್ತಿರುವ ತನಗೆ ಮನೆಗೆಲಸಗಳನ್ನು ನಿರ್ವಹಿಸುವುದು ಕೂಡಾ ಕಷ್ಟಕರವಾಗಿದೆಯೆಂದು ಅವರು ಅಲವತ್ತುಕೊಂಡಿದ್ದರು. ಭಾರತಕ್ಕೆ ಹಿಂತಿರುಗಲು ತಾನು ಸಾಕಷ್ಟು ಸಲ ಪ್ರಯತ್ನಿಸಿದ್ದೆ. ಆದರೆ ಅದು ಯಶಸ್ವಿಯಾಗಿರಲಿಲ್ಲ. ಆದರೆ ಇದೀಗ ತನಗೆ ಪತ್ನಿಯ ಜೊತೆ ಭಾರತಕ್ಕೆ ವಾಪಸಾಗಲು ನೆರವಾಗಬೇಕೆಂದು ಅವರು ಅಧಿಕಾರಿಗಳನ್ನು ಕೋರಿದ್ದರು ಶಿವಚರಣ್ ಅವರ ನೋವಿಗೆ ಸ್ಪಂದಿಸಿದ ಸುಷ್ಮಾ, ಫ್ರಾನ್ಸ್‌ನಲ್ಲಿನ ಭಾರತದ ರಾಯಭಾರಿ ಮೋಹನ್‌ಕುಮಾರ್ ಅವರಿಗೆ ಟ್ವೀಟ್ ಮಾಡಿ, ಕೂಡಲೇ ವೃದ್ಧ ದಂಪತಿಯನ್ನು ಸಂಪರ್ಕಿಸುವಂತೆ ಸೂಚನೆ ನೀಡಿದ್ದಾರೆ. ಮೋಹನ್ ಕುಮಾರ್ ಕೂಡಲೇ ಈ ಬಗ್ಗೆ ಸಚಿವೆಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು ಶಿವಚರಣ್ ದಂಪತಿಯನ್ನು ಭಾರತಕ್ಕೆ ಕರೆತರಲು ಸೂಕ್ತ ಏರ್ಪಾಡುಗಳನ್ನು ಮಾಡಲಾಗುವುದೆಂದು ತಿಳಿಸಿದ್ದಾರೆ.
ವೃದ್ಧದಂಪತಿಗೆ ಮಾನವೀಯ ನೆಲೆಯಲ್ಲಿ ನೆರವಿನ ಹಸ್ತ ಚಾಚಿದ ಸುಷ್ಮಾ ಸ್ವರಾಜ್‌ಗೆ ಟ್ವಿಟರ್‌ನಲ್ಲಿ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ.
ವಿದೇಶಗಳಲ್ಲಿ ತೊಂದರೆಗೆ ಸಿಲುಕಿರುವ ಭಾರತೀಯರ ನೆರವಿಗಾಗಿ ಸುಷ್ಮಾ ಇತ್ತೀಚೆಗೆ ಟ್ವಿಟ್ಟರ್ ಸೇವಾ ಎಂಬ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ವಿದೇಶಗಳಲ್ಲಿ ನೆರವಿನ ಅಗತ್ಯವಿರುವ ಭಾರತೀಯರು ಆಯಾ ರಾಯಭಾರಿ ಕಚೇರಿ ಅಥವಾ ಇಲಾಖೆಗೆ ಮಾತ್ರವಲ್ಲ ಸುಷ್ಮಾ ಸ್ವರಾಜ್ ಅವರಿಗೂ ಟ್ವಿಟರ್ ತಮ್ಮ ಅಹವಾಲನ್ನು ಸಲ್ಲಿಸಬಹುದಾಗಿದೆ.