×
Ad

ಕೊಲ್ಲೂರಿನಲ್ಲಿ ಗಾನ ಗಂಧರ್ವ ಕೆ.ಜೆ.ಜೇಸುದಾಸ್ ಹುಟ್ಟುಹಬ್ಬ, ಗಾನಸುಧೆ

Update: 2017-01-10 21:27 IST

ಕೊಲ್ಲೂರು, ಜ.10: ಕಳೆದ ನಾಲ್ಕು ದಶಕಗಳಿಗೂ ಅಧಿಕ ಸಮಯದಿಂದ ಸತತವಾಗಿ ಪಾಲಿಸಿಕೊಂಡು ಬಂದ ಸಂಪ್ರದಾಯದಂತೆ ದೇಶದ ಖ್ಯಾತನಾಮ ಶಾಸ್ತ್ರೀಯ ಸಂಗೀತಕಾರ, ಬಹುಭಾಷಾ ಚಲನಚಿತ್ರ ಹಿನ್ನೆಲೆ ಗಾಯಕ ಕೆ.ಜೆ. ಜೇಸುದಾಸ್ ಅವರು ಇಂದು ತಮ್ಮ 77ನೇ ಹುಟ್ಟುಹಬ್ಬವನ್ನು ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಆಚರಿಸಿಕೊಂಡರು.

ಪತ್ನಿ ಪ್ರಭಾ, ಪುತ್ರರಾದ ಖಾತ್ಯ ಹಿನ್ನೆಲೆಗಾಯಕ ವಿಜಯ್ ಮತ್ತು ವಿನೋದ್ ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಆಗಮಿಸಿದ ಜೇಸುದಾಸ್‌ರೊಂದಿಗೆ ಸಂಗೀತಗಾರರು, ಕಲಾವಿದರ ತಂಡವೂ ನಿನ್ನೆ ಸಂಜೆ ಕೊಲ್ಲೂರಿಗೆ ಆಗಮಿಸಿತ್ತು. ಜೇಸುದಾಸ್ ಇಂದು ಬೆಳಗ್ಗೆ ಪತ್ನಿ ಪ್ರಭಾ ಅವರೊಂದಿಗೆ ದೇವಿಗೆ ವಿಶೇಷ ಪೂಜೆ ನೆರವೇರಿಸಿದರಲ್ಲದೇ, ದೇವಸ್ಥಾನದಲ್ಲಿ ವಿಶೇಷ ಚಂಡಿಕಾಯಾಗ ನಡೆಸಿ ತಮ್ಮ 77ನೇ ಹುಟ್ಟುಹಬ್ಬವನ್ನು ಬಂಧು ಮಿತ್ರರ ನಡುವೆ ಸರಳವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು,  ಸಂಗೀತವೇ ನನ್ನ ಉಸಿರು. ಕೊಲ್ಲೂರು ಮುಕಾಂಬಿಕೆಯ ಪ್ರೇರಣೆಯಿಂದ ಜೀವನದಲ್ಲಿ ಕಿಂಚಿತ್ ಸಾಧನೆ ಮಾಡಲು ಸಾಧ್ಯವಾಗಿದೆ. ನನ್ನ ಜೀವಿತಕಾಲಾವಧಿಯಲ್ಲಿ ಸಂಗೀತಾಲಾಪನೆಯನ್ನು ಎಂದೂ ನಿಲ್ಲಿಸುವುದಿಲ್ಲ. ತಾಯಿ ಆಶೀರ್ವಾದದಿಂದ ಈ ಮಟ್ಟಕ್ಕೇರಲು ಸಾಧ್ಯವಾಗಿದೆ. ಅಹಂಕಾರವೆಂಬ ಅಸುರನನ್ನು ದೇವಿ ಹೊಡೆದಟ್ಟಿದ್ದಾಳೆ ಎಂದರು.
  
ಮುಕಾಂಬಿಕೆ ಶಕ್ತಿ ದೇವತೆ. ಯಾವುದೇ ಜಾತಿಬೇಧವಿಲ್ಲದೇ ಎಲ್ಲರನ್ನೂ ಅನುಗ್ರಹಿಸುತ್ತಾಳೆ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಹೀಗೆ ಎಲ್ಲಾ ಧರ್ಮದ ಜನರು ಕೊಲ್ಲೂರಿಗೆ ಬಂದು ದೇವಿಯನ್ನು ಆರಾಧಿಸುತ್ತಾರೆ. ಅವರೆಲ್ಲರನ್ನೂ ದೇವಿ ಅನುಗ್ರಹಿಸುತ್ತಾಳೆ ಎಂದರು.

ಜೇಸುದಾಸ್‌ರ ಶಿಷ್ಯ ಹಾಗೂ ಅಭಿಮಾನಿ ಕಾಂಞಗಾಡಿನ ರಾಮಚಂದ್ರನ್ ಅವರ ನೇತೃತ್ವದಲ್ಲಿ ಸತತ 15ನೇ ವರ್ಷದಲ್ಲಿ ದೇವಸ್ಥಾನದ ಸ್ವರ್ಣಮುಖಿ ಸಭಾಭವನದಲ್ಲಿ ಬೆಳಗಿನಿಂದ ಸಂಜೆಯವರೆಗೆ ಸಂಗೀತ ಕಚೇರಿ ನಡೆಯಿತು. ಇದರಲ್ಲಿ ಜೇಸುದಾಸ್ ಅವರು ಪಾಲ್ಗೊಂಡು ಭಕ್ತಿಗೀತೆ ಹಾಗೂ ಶಾಸ್ತ್ರೀಯ ಸಂಗೀತವನ್ನು ಹಾಡಿದ್ದು ನೆರೆದಿದ್ದ ಸಾವಿರಾರು ಮಂದಿ ಸಂಗೀತದ ಗಾನಸುಧೆಯಲ್ಲಿ ಮೀಯುವಂತೆ ಮಾಡಿದರು.

ಜೇಸುದಾಸ್ ದಂಪತಿಯನ್ನು ದೇವಸ್ಥಾನದ ಉಪ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News