ಸೈಕಲ್ ಚಿಹ್ನೆಯ ತಕರಾರು : 13ರಂದು ಹಾಜರಾಗುವಂತೆ ಎಸ್ಪಿ ಬಣಗಳಿಗೆ ಚುನಾವಣಾ ಆಯೋಗ ಸೂಚನೆ
ಹೊಸದಿಲ್ಲಿ, ಜ.10: ಸೈಕಲ್ ಚಿಹ್ನೆಗಾಗಿ ‘ಹೋರಾಡು’ತ್ತಿರುವ ಸಮಾಜವಾದಿ ಪಕ್ಷದ ಉಭಯ ಬಣಗಳ ವಾದವನ್ನು ಜನವರಿ 13ರಂದು ಆಲಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಉತ್ತರಪ್ರದೇಶದಲ್ಲಿ ಜ.17ರಂದು ಪ್ರಥಮ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು ಇದಕ್ಕೂ ಮುನ್ನ ಪಕ್ಷದ ಉಭಯ ಬಣಗಳ ಮುಖಂಡರಾದ ಮುಲಾಯಂ ಸಿಂಗ್ ಯಾದವ್ ಮತ್ತವರ ಪುತ್ರ ಅಖಿಲೇಶ್ ಯಾದವ್ ತಮ್ಮಿಳಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವರು ಎಂದು ಚುನಾವಣಾ ಆಯೋಗವು ಆಶಿಸಿದೆ. ಜನವರಿ 13ರ ವಿಚಾರಣೆ ವೇಳೆ ಹಾಜರಾಗುವಂತೆ ಉಭಯ ಬಣಗಳಿಗೂ ನೊಟೀಸ್ ಕಳುಹಿಸಲಾಗಿದೆ. ಪಕ್ಷದ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಪ್ರತಿನಿಧಿಗಳು ಅಖಿಲೇಶ್‌ಗೆ ಬೆಂಬಲ ಸೂಚಿಸಿದ ಪ್ರಮಾಣಪತ್ರವನ್ನು ಆಯೋಗಕ್ಕೆ ಸಲ್ಲಿಸಿದ್ದರೆ, ಪಕ್ಷದ ಸಂವಿಧಾನದ ಪ್ರಕಾರ ಮುಲಾಯಂ ಈಗಲೂ ಪಕ್ಷದ ಪರಮೋಚ್ಛ ನಾಯಕ ಎಂಬುದು ಮುಲಾಯಂ ಬಣದ ವಾದವಾಗಿದೆ. ಅಲ್ಲದೆ ಅಖಿಲೇಶ್ ಬಣ ಸಲ್ಲಿಸಿದ ಪ್ರಮಾಣಪತ್ರ ನಕಲಿಯಾಗಿದ್ದು, ಇದನ್ನು ಪರಿಶೀಲಿಸಿದ ಬಳಿಕವೇ ಯಾವುದೇ ನಿರ್ಧಾರಕ್ಕೆ ಬರಬೇಕು ಎಂದು ಮುಲಾಯಂ ಬಣ ಆಗ್ರಹಿಸಿದೆ.