×
Ad

ದಕ್ಷತೆಯಿಂದ ಕಾರ್ಯನಿರ್ವಹಿಸಲು ಮಾನಸಿಕ,ದೈಹಿಕ ಕ್ಷಮತೆ ಅಗತ್ಯ-ಪೊಲೀಸ್ ಕಮೀಶನರ್ ಚಂದ್ರಶೇಖರ್

Update: 2017-01-10 21:51 IST

ಮಂಗಳೂರು,ಜ.10:ಪೊಲೀಸರು ತಮ್ಮ ವೃತ್ತಿಯಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸಲು ದೈಹಿಕ ಹಾಗೂ ಮಾನಸಿಕ ಕ್ಷಮತೆ ಅಗತ್ಯ . ಈ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಯೂ ಸಹಕಾರಿ ಎಂದು ಮಂಗಳೂರು ಪೊಲೀಸ್ ಕಮೀಶನರ್ ಚಂದ್ರಶೇಖರ್ ತಿಳಿಸಿದ್ದಾರೆ.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

 ಕ್ರೀಡಾ ಕೂಟದಲ್ಲಿ ಸ್ಫರ್ಧಾ ಮನೋಭಾವನೆ ಇರುತ್ತದೆ.  ಜೊತೆಗೆ ಮನಸ್ಸಿಗೆ ಮುದನೀಡುವ ಚಟುವಟಿಕೆಯೂ ನಡೆಯುತ್ತದೆ. ಪೊಲೀಸರು ತಮ್ಮ ಇಲಾಖೆಯ ಕೆಲಸಗಳ ಒತ್ತಡಗಳ ನಡುವೆ ಈ ರೀತಿ ಮನಸ್ಸಿಗೆ ಮುದ ನೀಡುವ ಕ್ರೀಡಾ ಚಟುವಟಿಕೆಯಲ್ಲಿ ಸ್ವಲ್ಪ ಹೊತ್ತು ತೊಡಗಿಸಿಕೊಳ್ಳುವುದು ಉತ್ತಮ. ಇದರೊಂದಿಗೆ ಪೊಲೀಸ್ ಇಲಾಖೆಯ ವಿವಿಧ ಸ್ತರಗಳ ಅಧಿಕಾರಿಗಳ ನಡುವೆ ಆತ್ಮೀಯ ಮನೋಭಾವ ಬೆಳೆಯಲು ಸಹಾಯವಾಗುತ್ತದೆ. ಪೊಲೀಸರು ತಮ್ಮ ವೃತ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ದಿನದಲ್ಲಿ ಒಂದಷ್ಟು ಹೊತ್ತು ದೈಹಿಕ ಸಾರ್ಮರ್ಥ್ಯವನ್ನು ಕಾಪಾಡಿಕೊಳ್ಳುವ ಚಟುವಟಿಕೆಗಳಿಗೆ ಮೀಸಲಿಡಬೇಕಾಗಿದೆ ಎಂದು ಚಂದ್ರಶೇಖರ್ ತಿಳಿಸಿದರು.

ಸಮಾರೋಪ ಸಮಾರಂಭದ ಮೊದಲು ಪೊಲೀಸ್ ತಂಡಗಳ ಪಥ ಸಂಚಲನ ನಡೆಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ವೇದಮೂರ್ತಿ,ಉಪ ಪೊಲೀಸ್ ಕಮೀಷನರ್ ಡಾ.ಸಂಜೀವ ಎಂ.ಪಾಟೀಲ್,ಉಪ ಪೊಲೀಸ್ ಕಮೀಷನರ್ ಕೆ.ಎಂ.ಶಾಂತರಾಜು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News