ಮಧ್ಯವರ್ತಿಗಳ ಶೋಷಣೆಯಿಂದ ರೈತರಿಗೆ ಸಮಸ್ಯೆ: ಸಚಿವ ರೈ

Update: 2017-01-10 18:25 GMT

 ಉಪ್ಪಿನಂಗಡಿ, ಜ.10: ಮಧ್ಯವರ್ತಿಗಳ ಶೋಷಣೆಯಿಂದಾಗಿ ರೈತರು ಶ್ರಮವಹಿಸಿ ದುಡಿದರೂ ತಾವು ಬೆಳೆದ ಬೆಳೆೆಗೆ ಯೋಗ್ಯ ಬೆಲೆ ಸಿಗದೇ ಸಮಸ್ಯೆಗೆ ಸಿಲುಕುವಂತಾಗಿದೆ. ಎಪಿಎಂಸಿ ಯಾರ್ಡ್‌ಗಳಂತಹ ಮಾರುಕಟ್ಟೆ ಕೇಂದ್ರವನ್ನು ಬಳಸಿಕೊಂಡು ರೈತರು ತಮ್ಮ ಬೆಳೆೆಗಳಿಗೆ ತಾವೇ ಬೆಲೆ ನಿಗದಿ ಮಾಡಿ ಗ್ರಾಹಕರಿಗೆ ನೇರ ಮಾರಾಟ ಮಾಡುವ ಮೂಲಕ ಈ ಸಮಸ್ಯೆಯಿಂದ ಮುಕ್ತರಾಗಲು ರೈತರು ಮುಂದಾಗಬೇಕಿದ್ದು, ತಮ್ಮ ಬೆಳೆಗಳಿಗೆ ವೌಲ್ಯವರ್ಧನೆ ಮಾಡಬಲ್ಲ ಅನ್ಯ ಕ್ಷೇತ್ರದತ್ತಲೂ ಗಮನಹರಿಸಬೇಕಿದೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ನುಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಪುತ್ತೂರು ತಾಲೂಕು, ಕೃಷಿ ಉತ್ಸವ ಸಮಿತಿ ಪುತ್ತೂರು ತಾಲೂಕು, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಪುತ್ತೂರು ತಾಲೂಕು, ಸರಕಾರಿ ಇಲಾಖೆಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜ.10ರಂದು ನೆಲ್ಯಾಡಿಯ ಗಾಂಧಿ ಮೈದಾನದಲ್ಲಿ ಆರಂಭವಾದ ಕೃಷಿ ಉತ್ಸವ -2017 ಇದನ್ನು ಉದ್ಘಾಟಿಸಿ ಮಾತನಾಡಿದರು.

ರೈತರು ತಾವು ಬೆಳೆಯುವ ಕೃಷಿಗಳನ್ನು ಸಮರ್ಪಕ ಹಾಗೂ ಲಾಭದಾಯಕವಾಗಿ ಬಳಸಿಕೊಳ್ಳುವ ಬಗ್ಗೆ ಇನ್ನಷ್ಟು ಮಾಹಿತಿಗಳ ವಿನಿಮಯ ಕೃಷಿಕರ ನಡುವೆ ನಡೆಯಬೇಕಿದೆ. ಯೋಜನಾ ಬದ್ಧವಾಗಿ ಕೃಷಿ ಕಾರ್ಯ ನಡೆಸಿದರೆ ಮಾತ್ರ ಲಾಭದ ನಿರೀಕ್ಷೆ ಸಾಧ್ಯ ಎಂದ ಅವರು, ಅನ್ನದಾತರ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಈ ದೇಶದಲ್ಲಿ ಭೂ ಮಸೂದೆ ಕಾನೂನು ಜಾರಿಯಾಗಿದ್ದು, ಅಂದು ಭೂ ಮಾಲಕರಿಗೆ ನೋವು ತಂದ ಈ ಕಾನೂನು ಇಂದು ದೇಶದಲ್ಲಿ ಸಾಮಾಜಿಕ ನ್ಯಾಯ ಮೂಡಿಸಲು ಕಾರಣವಾಗಿದೆ ಎಂದರು.

 ವನ್ಯ ಜೀವಿಗಳ ಉಪಟಳಕ್ಕೆ ತುತ್ತಾದ ಕೃಷಿಕರಿಗೆ ನೆರವಾಗಿ ಎಂಬ ಬೇಡಿಕೆ ಸಭಿಕರಿಂದ ವ್ಯಕ್ತವಾದಾಗ, ಅದಕ್ಕುತ್ತರಿಸಿದ ಸಚಿವರು, ಮಿತಿಯಲ್ಲಿರುವ ನಮ್ಮ ಅರಣ್ಯವನ್ನು ಸಾಧ್ಯವಾದಷ್ಟರ ಮಟ್ಟಿಗೆ ಒತ್ತುವರಿ ಮಾಡುವುದನ್ನು ನಾವು ನಿಲ್ಲಿಸದಿದ್ದಲ್ಲಿ ವನ್ಯಜೀವಿಗಳು ಅವುಗಳಿಗೆ ವಾಸಿಸಲು ಸ್ಥಳವಿಲ್ಲದೆ ನಾಡಿಗೆ ಇಳಿಯುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಕಾಡಿನ ವಿಚಾರದಲ್ಲಿ ಸ್ವಾರ್ಥ ಬಿಟ್ಟು ಎತ್ತರದ ವ್ಯಕ್ತಿತ್ವ ಪ್ರದರ್ಶಿಸೋಣ. ಆದಾಗ್ಯೂ ಕಾಡು ಪ್ರಾಣಿಗಳಿಂದ ತೊಂದರೆಗೊಳಗಾದವರಿಗೆ 5 ಲಕ್ಷ ರೂ. ಪರಿಹಾರ, ಭಾಗಶಃ ಅಂಗ ಊನವಾದವರಿಗೆ 2 ಲಕ್ಷ ರೂ. ಪರಿಹಾರ ಒದಗಿಸಲು ಕ್ರಮ ಜರಗಿಸಲಾಗಿದೆ ಎಂದರು.

    

 ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಯುವ ಜನರನ್ನು ಕೃಷಿಯತ್ತ ಆಕರ್ಷಿಸುವಂತೆ ಮಾಡುವ ಪ್ರಯತ್ನ ಹೆಚ್ಚಿನ ವೇಗದಲ್ಲಿ ನಡೆಯಬೇಕಾಗಿದೆ. ಇಂದಿನ ಯುವ ಪೀಳಿಗೆಯಲ್ಲಿ ಭತ್ತ ಕೃಷಿಯ ಅರಿವೇ ಇಲ್ಲದಿರುವುದು ಕಳವಳಕಾರಿ ವಿದ್ಯಮಾನವಾಗಿದೆ ಎಂದರು. ವಸ್ತು ಪ್ರದರ್ಶನವನ್ನು ಶಾಸಕಿ ಶಕುಂತಳಾ ಶೆಟ್ಟಿ ಉದ್ಘಾಟಿಸಿದರು. ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್.ಮಂಜುನಾಥ್ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ತೋರಿದ ಕೆ. ಮೋನಪ್ಪ ಪೂಜಾರಿ, ಕೆ.ವೇದನಾಥ ಸುವರ್ಣ, ಕೆ.ಗೋಪಣ್ಣ ಗೌಡ ಹಾಗೂ ಭತ್ತ ಬೆಳೆ ಸ್ಪರ್ಧೆಯಲ್ಲಿ ವಿಜೇತರಾದ ಜಯರಾಮ ರೈ, ಯು. ಆನಂದ ಗೌಡ, ಶ್ರೀರಾಮ ಪಕ್ಕಳರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಜಿಪಂ ಸದಸ್ಯ ಸರ್ವೋತ್ತಮ ಗೌಡ, ತಾಪಂ ಸದಸ್ಯೆ ಉಷಾ ಅಂಚನ್, ಗ್ರಾಪಂ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ, ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ರೊ. ಅಬ್ರಹಾಂ ವರ್ಗೀಸ್, ಕೃಷಿ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ಸೀತಾರಾಮ ಶೆಟ್ಟಿ, ಕೌಶಲ್ ಪ್ರಸಾದ್, ಸೆಬಾಸ್ಟಿನ್, ಕೆಂಪೇಗೌಡ, ಪಿ.ಪಿ. ವರ್ಗೀಸ್, ಮೊದಲಾದ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಬ್ರಾಯ ಪುಣಚ, ಸುಂದರ ಗೌಡ, ಸುಬ್ರಹ್ಮಣ್ಯ ಜಿ, ಮಹೇಂದ್ರ ಪಡ್ಪು, ವಸಂತ ಗೌಡ ಬಜತ್ತೂರು, ಕೇಶವ ಬಜತ್ತೂರು, ಅಶೋಕ್ ಆಲಂತಾಯ, ಪ್ರಸನ್ನಕುಮಾರ್, ನೆಲ್ಯಾಡಿ ವಲಯ ಮೇಲ್ವಿಚಾರಕ ಕುಶಾಲಪ್ಪಗೌಡ, ಕೃಷಿ ಅಧಿಕಾರಿ ಹರೀಶ್, ವಲಯಾಧ್ಯಕ್ಷ ಸೆಬಾಸ್ಟಿಯನ್ ಪಿ.ಜೆ., ನೆಲ್ಯಾಡಿ ಒಕ್ಕೂಟದ ಅಧ್ಯಕ್ಷ ತುಕಾರಾಮ ರೈ, ಪ್ರಚಾರ ಸಮಿತಿಯ ಸಂಚಾಲಕ ಸುಧೀರ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

 ಕೃಷಿ ಉತ್ಸವ ವ್ಯವಸ್ಥಾಪನಾ ಸಮತಿಯ ಗೌರವಾಧ್ಯಕ್ಷ ಧನ್ಯ ಕುಮಾರ್ ರೈ ಸ್ವಾಗತಿಸಿದರು. ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ರಾಮಣ್ಣ ಗೌಡ ವಂದಿಸಿದರು. ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ರವೀಂದ್ರ ಟಿ. ಉಪನ್ಯಾಸಕ ಚೇತನ್ ಆನೆಗುಂಡಿ ನಿರೂಪಿಸಿದರು.

ಅತ್ಯಾಕರ್ಷಕ ಮೆರವಣಿಗೆ: ಕೃಷಿ ಉತ್ಸವಕ್ಕೆ ಪೂರ್ವಭಾವಿಯಾಗಿ ನಡೆದ ಮೆರವಣಿಗೆ ಅತ್ಯಾಕರ್ಷಕವಾಗಿ ಮೂಡಿ ಬಂದಿತ್ತು. ಉಸ್ತುವಾರಿ ಸಚಿವರು ಎತ್ತುಗಳಿಗೆ ಮೇವು ನೀಡುವ ಮೂಲಕ ಪ್ರಾತ್ಯಕ್ಷಿಕೆ ಗೆ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News