ರಷ್ಯಾ ಬಳಿ ಟ್ರಂಪ್ ಬಗ್ಗೆ "ಸ್ಫೋಟಕ" ವೈಯಕ್ತಿಕ ಮಾಹಿತಿ!

Update: 2017-01-11 03:35 GMT

ವಾಷಿಂಗ್ಟನ್, ಜ.11: ರಷ್ಯನ್ ಕಾರ್ಯಾಚರಣೆಗಾರರು ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಹೊಂದಿದ್ದ ವೈಯಕ್ತಿಕ ಹಾಗೂ ಹಣಕಾಸು ಮಾಹಿತಿ ವಿಚಾರದಲ್ಲಿ ರಾಜಿ ಮಾಡಿಕೊಂಡಿರುವ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ, ಇದು ಬಹಳಷ್ಟು ಮಂದಿ ಅಮೆರಿಕನ್ ಅಧಿಕಾರಿಗಳಿಗೂ ತಿಳಿದಿದೆ ಎಂಬ ಅಂಶವನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಲ್ಲಿಸಲಾದ ವರ್ಗೀಕೃತ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಟ್ರಂಪ್ ಅಧ್ಯಕ್ಷರಾಗುವ ನಿಟ್ಟಿನಲ್ಲಿ ಇದು ದೊಡ್ಡ ತಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆರೋಪಗಳ ಮುಖ್ಯಾಂಶವಿರುವ ಎರಡು ಪುಟಗಳ ಟಿಪ್ಪಣಿಯನ್ನು "2016ರ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪ" ಎಂಬ ವರದಿಯ ಜತೆ ನೀಡಲಾಗಿದೆ. ಬ್ರಿಟನ್‌ನ ಮಾಜಿ ಗೂಢಚರ್ಯರೊಬ್ಬರು ಕಲೆ ಹಾಕಿದ ಟಿಪ್ಪಣಿಗಳಿಂದ ಈ ಆರೋಪ ಬೆಳಕಿಗೆ ಬಂದಿದೆ. ರಷ್ಯನ್ ಮೂಲಗಳ ಮಾಹಿತಿಯನ್ನು ಆಧರಿಸಿ ಇರುವ ಈ ಆರೋಪಗಳ ವಿಶ್ವಾಸಾರ್ಹತೆ ಹಾಗೂ ನಿಖರತೆಯನ್ನು ಎಫ್‌ಬಿಐ ಪರಿಶೀಲಿಸುತ್ತಿದೆ. ಆದರೆ ಈ ಟಿಪ್ಪಣಿಯನ್ನು ಟ್ರಂಪ್ ಬಗ್ಗೆ ಸಿದ್ಧಪಡಿಸಲಾಗಿದೆ ಎನ್ನುವುದನ್ನು ನಿರೂಪಿಸುವ ಅಂಶ ಇನ್ನೂ ಖಚಿತವಾಗಿಲ್ಲ ಎಂದು ತಿಳಿದುಬಂದಿದೆ.

ಅಮೆರಿಕ ಗುಪ್ತಚರ ವಿಭಾಗದ ನಾಲ್ಕು ಮಂದಿ ಹಿರಿಯ ಅಧಿಕಾರಿಗಳಾದ ನ್ಯಾಷನಲ್ ಇಂಟೆಲಿಜೆನ್ಸ್‌ನ ನಿರ್ದೇಶಕ ಜೇಮ್ಸ್ ಕ್ಲಪ್ಪರ್, ಎಫ್‌ಬಿಐ ನಿರ್ದೇಶಕ ಜೇಮ್ಸ್ ಕೋಮೆ, ಸಿಐಎ ನಿರ್ದೇಶಕ ಜಾನ್ ಬ್ರೆನ್ನನ್ ಹಾಗೂ ಎನ್‌ಎಸ್‌ಎ ನಿರ್ದೇಶಕ ಅಡ್ಮಿರಲ್ ಮೈಕ್ ರಾಡ್ರಿಗ್ಸ್ ಈ ವರ್ಗೀಕೃತ ದಾಖಲೆಯನ್ನು ಸಲ್ಲಿಸಿದ್ದಾರೆ.

ರಷ್ಯನ್ ಅಧಿಕಾರಿಗಳು ಎರಡೂ ಪಕ್ಷಕ್ಕೆ ಹಾನಿ ಮಾಡಬಹುದಾದ ಮಾಹಿತಿಯನ್ನು ಸಂಗ್ರಹಿಸಿದ್ದರು. ಆದರೆ ಹಿಲರಿ ಕ್ಲಿಂಟನ್ ಹಾಗೂ ಡೆಮಾಕ್ರಟಿಕ್ ಪಕ್ಷಕ್ಕಷ್ಟೇ ಹಾನಿಯಾಗುವ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಟ್ರಂಪ್ ಅವರಿಗೆ ಲಾಭ ಮಾಡಿಕೊಟ್ಟಿದ್ದಾರೆ ಎಂಬ ಅಂಶವನ್ನು ಗುಪ್ತಚರ ವಿಭಾಗ ಸ್ಪಷ್ಟಪಡಿಸಿದೆ ಎಂದು ಸಿಎನ್‌ಎನ್ ಹೇಳಿದೆ.

ಪ್ರಚಾರದ ವೇಳೆ ಟ್ರಂಪ್ ಬೆಂಬಲಿಗರು ಹಾಗೂ ಮಧ್ಯವರ್ತಿಗಳು ರಷ್ಯಾ ಸರಕಾರದ ಜತೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದರು ಎನ್ನುವುದನ್ನು ಕೂಡಾ ಭದ್ರತಾ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ಆದರೆ ಅಧಿಕಾರ ವರ್ಗಾಂತರ ತಂಡ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News