ಸಂತಾಪ ಬೇಡ , ಶೋಕಾಚರಣೆ ಇಲ್ಲ: ಹತ ಸೌದಿ ಭಯೋತ್ಪಾದಕನ ತಂದೆಯ ಘೋಷಣೆ
ಮನಾಮ, ಜ.11: ಕಳೆದ ವಾರ ರಿಯಾಧ್ ಸಮೀಪದ ಅಲ್ ಯಾಸ್ಮೀನ್ ಜಿಲ್ಲೆಯಲ್ಲಿ ಸೌದಿ ಭದ್ರತಾ ಪಡೆಗಳಿಂದ ಇಬ್ಬರು ಉಗ್ರಗಾಮಿಗಳು ಹತರಾಗಿದ್ದಾರೆ. ಇದೀಗ ಅವರಲ್ಲೊಬ್ಬನ ತಂದೆ ತನ್ನ ಪುತ್ರನ ಸಾವಿಗೆ ಸಂತಾಪಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಶನಿವಾರದಂದು ತಯೇಯ ಹಾಗೂ ಸಲೇಂ ಬಿನ್ ಯಸ್ಲಂ ಅಲ್ ಸಯಾರಿ ಎಂಬ ಇಬ್ಬರು ಉಗ್ರರನ್ನು ಅವರ ಬಾಡಿಗೆ ವಿಲ್ಲಾವನ್ನು ಸುತ್ತವರಿದಿದ್ದ ಭದ್ರತಾ ಪಡೆಗಳು ನಂತರ ಅಲ್ಲಿಂದ ತಮ್ಮಲ್ಲಿದ್ದ ಕಲಶ್ನಿಕೊವ್ ರೈಫಲ್ ಗಳೊಂದಿಗೆ ಭದ್ರತಾ ಪಡೆಯ ಕಾರೊಂದರಲ್ಲಿ ತಪ್ಪಿಸಲೆತ್ನಿಸಿದ್ದ ಅವರನ್ನು ಪೊಲೀಸ್ ಅಧಿಕಾರಿಯೊಬ್ಬರು ಗುಂಡಿಕ್ಕಿ ಸಾಯಿಸಿದ್ದರು.
ಇದೀಗ ಸಲೇಂ ತಂದೆ ತಲಾಲ್ ಬಿನ್ ಸಮ್ರಾನ್ ಅಲ್ ಸಯೀದಿ ತಮ್ಮ ಪುತ್ರನ ಸಾವಿಗೆ ಯಾರೂ ಶೋಕಾಚರಿಸುವುದಿಲ್ಲ ಹಾಗೂ ತಮ್ಮ ಕುಟುಂಬ ಯಾರಿಂದಲೂ ಸಂತಾಪ ಸ್ವೀಕರಿಸುವುದಿಲ್ಲವೆಂದು ಖಡಾಖಂಡಿತವಾಗಿ ತಿಳಿಸಿದ್ದಾರೆ. ‘‘ಉಗ್ರವಾದಿ ನನ್ನ ಸ್ವಂತ ಮಗನಾಗಿದ್ದರೂ ಆತನಿಗೆ ಸಹಾನುಭೂತಿ ಸೂಚಿಸುವ ಅಗತ್ಯವಿಲ್ಲ’’ ಎಂದವರು ಹೇಳಿದ್ದಾರೆ.
‘‘ನನ್ನ ಪುತ್ರ ಹಾದಿ ತಪ್ಪಿದ್ದ ಹಾಗೂ ನಾನು ಹೇಳಿದಂತೆ ಕೇಳಿರಲಿಲ್ಲ’’ ಎಂದು ತಲಾಲ್ ಹೇಳಿದ್ದಾರೆ. ‘‘ಆತ ನ್ಯೂಜಿಲೆಂಡಿನಲ್ಲಿ ಕಲಿತು ಅಲ್ಲಿಂದ ರಜೆಯಲ್ಲಿ ಮನೆಗೆ ಹಿಂದಿರುಗುವ ಬದಲು ಸಿರಿಯಾಗೆ ಹೋಗಿದ್ದ. ಆದರೆ ಮತ್ತೆ ಆತ ಮನೆಗೆ ಬರಲು ನಿರಾಕರಿಸಿದಾಗ ತಾನು ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ’’ ಅವರು ತಿಳಿಸಿದ್ದಾರೆ.
ತನ್ನ ಹೆತ್ತವರ ನಾಲ್ಕನೇ ಪುತ್ರನಾಗಿದ್ದ ತಯೇಯ ಯಾವತ್ತೂ ತಾನೊಬ್ಬ ಉಗ್ರನೆಂದು ಯಾರಿಗೂ ತಿಳಿಯುವಂತೆ ವರ್ತಿಸುತ್ತಿರಲಿಲ್ಲ ಹಾಗೂ ಯಾರಿಗೂ ಈ ಬಗ್ಗೆ ಮೊದಲು ಸಂಶಯ ಬಂದಿರಲಿಲ್ಲ ಎಂದು ಅವರು ಹೇಳಿದ್ದಾರೆ.