ಕಣ್ಣೀರಿಟ್ಟು ವಿದಾಯ ಹೇಳಿದ ಒಬಾಮ: ಮತ್ತೆ ‘ಬರಾಕ್’ ಹೇಳಿದ ಜನತೆ

Update: 2017-01-11 07:29 GMT

ಚಿಕಾಗೊ, ಜ.11: ತಮ್ಮ ಹುಟ್ಟೂರು ಚಿಕಾಗೋದ ಕನ್ವೆನ್ಶನ್ ಸೆಂಟರ್ ಸಭಾಂಗಣದಲ್ಲಿ ಭಾವನಾತ್ಮಕ ವಿದಾಯ ಭಾಷಣ ನೀಡಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ದೇಶದ ಜನತೆ ತಮ್ಮ ಮೇಲಿಟ್ಟ ಪ್ರೀತಿ ಅಭಿಮಾನದಿಂದ ಭಾವಪರವಶರಾಗಿ ಕಣ್ಣೀರಿಟ್ಟರು.

ತಮ್ಮ ಅಧಿಕಾರಾವಧಿಯಲ್ಲಿ ತನಗಾದ ನಿರಾಸೆಗಳು ಹಾಗೂ ಭವಿಷ್ಯದ ಬಗ್ಗೆ ತನಗಿರುವ ಭರವಸೆಗಳ ಬಗ್ಗೆ ಒಬಾಮ ಭಾಷಣ ಮಾಡಿದಾಗ ದೇಶದಲ್ಲಿ ಹತ್ತು ದಿನಗಳಲ್ಲಿ ನಡೆಯಲಿರುವ ನಾಯಕತ್ವ ಬದಲಾವಣೆಯ ಹಿನ್ನೆಲೆಯಲ್ಲಿ ಜನತೆಯ ಮನದಲ್ಲಿರುವ ಆತಂಕಗಳನ್ನು ಸ್ಪಷ್ಟವಾಗಿಸಿತ್ತು.

ಭಾಷಣದಲ್ಲಿ ತಮ್ಮ ಅವಧಿಯಲ್ಲಿನ ಸೋಲು&ಗೆಲುವುಗಳು, ಉಳಿಸಿದ ಮಾತುಗಳು ಹಾಗೂ ಉಳಿಸದೇ ಹೋದ ಮಾತುಗಳ ಬಗ್ಗೆ ಉಲ್ಲೇಖಿಸಿದ ಒಬಾಮ ‘‘ಭವಿಷ್ಯ ನಮ್ಮದು’’ ಎಂಬ ಭಾವನೆ ಅಮೆರಿಕನ್ನರಲ್ಲಿ ಮೂಡಬೇಕಿದೆ ಎಂದರು.

ನೇರ ಹಾಗೂ ನಿಖರ ಮಾತುಗಳನ್ನು ಭಾಷಣದುದ್ದಕ್ಕೂ ಆಡಿದ ಒಬಾಮ ಕೊನೆಯಲ್ಲೊಮ್ಮೆ ಕಣ್ಣೀರು ಒರೆಸುತ್ತಿರುವುದು ಕಂಡು ಬಂತು. ಭಾಷಣದಲ್ಲಿ ಎಲ್ಲಿಯೂ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಉಲ್ಲೇಖಿಸದ ಒಬಾಮ ಬದಲಾವಣೆ ಅನಿವಾರ್ಯ ಎಂದು ಹೇಳಿ, ‘‘ಒಂದು ಅಧ್ಯಕ್ಷರಿಂದ ಇನ್ನೊಂದು ಅಧ್ಯಕ್ಷರಿಗೆ ಶಾಂತಿಯುತ ಅಧಿಕಾರ ಹಸ್ತಾಂತರ ಅಮೆರಿಕದ ಸಂಪ್ರದಾಯ’’ ಎಂದರು.

ಇದಕ್ಕೂ ಮೊದಲು ಅಲ್ಲಿ ನೆರೆದಿದ್ದ ಜನತೆ ‘‘ಇನ್ನೂ ನಾಲ್ಕು ವರ್ಷಗಳು’’ ಎಂದು ಜೋರಾಗಿ ಹೇಳತೊಡಗಿದಾಗ ಒಬಾಮ ‘‘ನನಗೆ ಹಾಗೆ ಮಾಡಲು ಸಾಧ್ಯವಿಲ್ಲ’’ ಎಂದಷ್ಟೇ ಹೇಳಿ ನಕ್ಕು ಬಿಟ್ಟರು.

ದೇಶದ ಭವಿಷ್ಯಕ್ಕೆ ಅಪಾಯವೊಡ್ಡುತ್ತಿರುವ ವ್ಯಕ್ತಿಯೆಂದು ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಅಧ್ಯಕ್ಷೀಯ ಚುನಾವಣೆಯ ಪ್ರಚಾರದುದ್ದಕ್ಕೂ ಹೇಳಿದ್ದ ಒಬಾಮ ತಮ್ಮ ಉತ್ತರಾಧಿಕಾರಿ ಬಗ್ಗೆ ವಿದಾಯ ಭಾಷಣದಲ್ಲಿ ಸೊಲ್ಲೆತ್ತಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News