ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ನಿರಾಕರಿಸಿದ ಜಿ.ರಾಜಶೇಖರ್
ಉಡುಪಿ, ಜ.11: ಹಿರಿಯ ಚಿಂತಕ ಹಾಗೂ ಲೇಖಕ ಜಿ.ರಾಜಶೇಖರ್ ಅವರು ತನ್ನ ‘ಬಹುವಚನ ಭಾರತ’ ಕೃತಿಗೆ ಬಂದಿರುವ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.
ಇದಕ್ಕೆ ಅವರು ನೀಡಿರುವ ಕಾರಣ ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ. ಭಾರತದಲ್ಲಿ ಅಹಿಷ್ಣುತೆ ತಾಂಡವಾಡುತ್ತಿರುವುದನ್ನು ಖಂಡಿಸಿ 2015ರಲ್ಲಿ ದೇಶದ ಖ್ಯಾತನಾಮ ಸಾಹಿತಿಗಳು ತಮಗೆ ದೊರೆತಿರುವ ಪ್ರಶಸ್ತಿಗಳನ್ನು ವಾಪಸ್ ಮಾಡುವ ಮೂಲಕ ಅಭಿಯಾನವನ್ನೇ ಮಾಡಿದ್ದರು. ಅಂದು ದೇಶದಲ್ಲಿ ಕಂಡುಬಂದಿದ್ದ ಅಸಹಿಷ್ಣುತೆಯ ವಾತಾವರಣ ಈಗಲೂ ಮುಂದುವರಿದಿರುವುದೇ ಪ್ರಶಸ್ತಿ ನಿರಾಕರಿಸಲು ಕಾರಣ ಎಂದು ಜಿ.ರಾಜಶೇಖರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
‘‘ರಾಜ್ಯ ಸಾಹಿತ್ಯ ಅಕಾಡಮಿ ನನ್ನ ‘ಬಹುವಚನ ಭಾರತ’ ಕೃತಿಗೆ ಪ್ರಶಸ್ತಿ ನೀಡಿದೆ. ಅಕಾಡೆಮಿ ನನ್ನ ಬಗ್ಗೆ ತೋರಿದ ಗೌರವಕ್ಕೆ ನಾನು ಕೃತಜ್ಞ. ಆದರೆ, 2015ರಲ್ಲಿ ಸಾಹಿತಿಗಳು ತಮಗೆ ನೀಡಿದ ಪ್ರಶಸ್ತಿಗಳ ನಿರಾಕರಣೆ / ವಾಪಸಾತಿಗೆ ಯಾವ ಸನ್ನಿವೇಶ ಕಾರಣವಾಯಿತೋ, ಆ ಸನ್ನಿವೇಶ ಈಗ ಇನ್ನಷ್ಟು ಹದಗೆಟ್ಟಿದೆ. ಹಾಗಾಗಿ ಈ ಪ್ರಶಸ್ತಿಯನ್ನ ನಾನು ಸ್ವೀಕರಿಸಲಾರೆ’’ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.