×
Ad

ಉದ್ಯಮಿ ಉಮೇಶ್ ಶೆಟ್ಟಿ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಬಂಧನ

Update: 2017-01-11 17:06 IST

ಮಂಗಳೂರು, ಜ.11: ಮುಲ್ಕಿ ಠಾಣಾ ವ್ಯಾಪ್ತಿಯ ಕೆಲೆಂಜೂರು ಗ್ರಾಮ ನಿವಾಸಿ ಹಾಗೂ ಪ್ರಭಾವತಿ ಟ್ರಾನ್ಸ್ಪೋರ್ಟ್ ಮಾಲಕ ಉಮೇಶ್ ಶೆಟ್ಟಿ(30) ಕೊಲೆ ಪ್ರಕರಣದ ಆರೋಪಿಗಳನ್ನು ಮುಲ್ಕಿ ಹಾಗೂ ಮೂಡುಬಿದಿರೆ ಪೊಲೀಸರು ಜಂಟಿ ಕಾರ್ಯಚರಣೆಯಲ್ಲಿ ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಂಧಿತರನ್ನು ನಡುಗೋಡು ಗ್ರಾಮದ ಕೊಡೆತ್ತೂರಿನ ಪ್ರಸಾದ್ ಆಚಾರ್ಯ (27), ನಿಡ್ಡೋಡಿ ಗ್ರಾಮದ ನಿವಾಸಿಗಳಾದ ರಾಜೇಶ ಶೆಟ್ಟಿ (32) ಮತ್ತು ತಿಲಕ ಪೂಜಾರಿ (26), ಮೂಡಿಗೆರೆ ತಾಲೂಕಿನ ಪ್ರಕಾಶ್ (28) ಎಂದು ಗುರುತಿಸಲಾಗಿದೆ.

 ಕುಳಾಯಿಯಲ್ಲಿರುವ ಪ್ರಭಾವತಿ ಟ್ರಾನ್ಸ್‌ಪೋರ್ಟ್‌ನಲ್ಲಿ ಕೆಲಸ ಮುಗಿಸಿ ಡಿ.28ರಂದು ಸಂಜೆ ತಾನು ದಿನ ನಿತ್ಯ ತೆರಳುತ್ತಿದ್ದ ಸರ್ವಾಣಿ ಬಸ್ಸಿನಲ್ಲಿ ಉಮೇಶ್ ಶೆಟ್ಟಿ ತನ್ನ ಮನೆಯಾದ ಕೆಲೆಂಜೂರುಗೆ ಮರಳದೆ ಕಾಣೆಯಾಗಿದ್ದರು. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜ.1ರಂದು ಕಲ್ಲಮುಂಡ್ಕೂರು ಗ್ರಾಮದ ನಿಡ್ಡೋಡಿ ದಡ್ಡು ಎಂಬಲ್ಲಿನ ಹಾಡಿಯಲ್ಲಿ ಉಮೇಶ್ ಶೆಟ್ಟಿಯ ಮೃತದೇಹ ಕಂಡು ಬಂದಿತ್ತು. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿತ್ತು. ಅದರಂತೆ ಮುಲ್ಕಿ ಮತ್ತು ಮೂಡುಬಿದಿರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಿಡ್ಡೋಡಿ ಬಳಿ ಜ.10ರಂದು ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು.

ತಾನು ಉಮೇಶ್ ಶೆಟ್ಟಿಯಿಂದ ಪಡೆದ ಹಣವನ್ನು ಹಿಂತಿರುಗಿಸುವ ಬದಲು ಲಪಟಾಯಿಸುವ ಉದ್ದೇಶದಿಂದ ಕಲ್ಲಿನ ಕೋರೆ ತೋರಿಸುವ ನೆಪದಲ್ಲಿ ಪಕ್ಷಿಕೆರೆಯಲ್ಲಿ ಬಸ್ಸಿನಿಂದ ಇಳಿಸಿ ಕಾರಿನಲ್ಲಿ ಕರೆದೊಯ್ದು ಕುದ್ರಿ ಪದವು ಬಳಿ ಇತರರ ಜೊತೆ ಸೇರಿಕೊಂಡು ಕೊಲೆ ಮಾಡಿ ಬಿಸಾಡಿರುವುದಾಗಿ ಪ್ರಸಾದ್ ಆಚಾರ್ಯ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ.

ಪತ್ತೆ ಕಾರ್ಯಾಚರಣೆಯಲ್ಲಿ ಉತ್ತರ ಉಪವಿಭಾಗದ ಸಹಾಯಕ ಆಯುಕ್ತ ರಾಜೇಂದ್ರ ಡಿ.ಎಸ್., ಮುಲ್ಕಿ ಠಾಣಾ ನಿರೀಕ್ಷಕ ಅನಂತ ಪದ್ಮನಾಭ, ಮೂಡುಬಿದಿರೆ ಠಾಣಾ ನಿರೀಕ್ಷಕ ರಾಮಚಂದ್ರ ನಾಯಕ್, ಎಸ್ಸೈಗಳಾದ ದೇಜಪ್ಪ, ಮಾರುತಿ, ಎಚ್‌ಸಿಗಳಾದ ಚಂದ್ರಶೇಖರ್, ಧರ್ಮೇಂದ್ರ , ಸಿಬ್ಬಂದಿ ರಾಜೇಶ, ಆಣ್ಣಪ್ಪ, ಸುಧೀರ್, ಬಸವರಾಜ್, ಅಕಿಲ್, ಸುಜನ್, ಶಿವಕುಮಾರ್ ಭಾಗವಹಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಕೆ.ಎಂ. ಶಾಂತರಾಜು, ಡಾ. ಸಂಜೀವ ಎಂ. ಪಾಟೀಲ್, ಎಸಿಪಿ ರಾಜೇಂದ್ರ ಡಿ.ಎಸ್. ಉಪಸ್ಥಿತರಿದ್ದರು.

ಪ್ರಮುಖ ಆರೋಪಿ ಪ್ರಸಾದ್ ಆಚಾರ್ಯ, ರಾಜೇಶ್ ಶೆಟ್ಟಿ, ತಿಲಕ ಪೂಜಾರಿಯು ಎಂಆರ್‌ಪಿಎಲ್, ಎಂಸಿಎಫ್‌ನಲ್ಲಿ ಕ್ರೇನ್ ಅಪರೇಟರ್ ಮತ್ತು ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದರೆ, ಮೂಡಿಗೆರೆಯ ಪ್ರಕಾಶ್ ಮರದ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News