ವಿಶ್ವದ ಅತ್ಯಂತ ದೊಡ್ಡ ಹುದ್ದೆ ಬಿಟ್ಟ ಮೇಲೆ ಒಬಾಮಗೆ ಸಿಗುವ ಸೌಲಭ್ಯಗಳೇನು ? ಮಿತಿಯೇನು ?

Update: 2017-01-11 12:54 GMT

ವಾಶಿಂಗ್ಟನ್, ಜ. 11: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮತ್ತು ಅವರ ಕುಟುಂಬ ಈ ತಿಂಗಳ 20ರಂದು ಶ್ವೇತಭವನದಿಂದ ಹೊರಹೋಗಬೇಕಾಗಿದೆ. ಆದರೆ, ಅವರಿಗೆ ಹಲವು ಸೌಲಭ್ಯಗಳು ದೊರೆಯುತ್ತವೆ.

ಅವರಿಗೆ ದೊಡ್ಡ ಮೊತ್ತದ ಪಿಂಚಣಿ ದೊರೆಯುತ್ತದೆ. ಜೊತೆಗೆ ಅವರ ಇತರ ಖರ್ಚು ವೆಚ್ಚಗಳನ್ನೂ ಸರಕಾರ ಭರಿಸುತ್ತದೆ.

ಅವರಿಗೆ ದೊರೆಯುವ ಸೌಲಭ್ಯಗಳು ಹೀಗಿವೆ:

►ಪಿಂಚಣಿ

ಅಮೆರಿಕದ ಮಾಜಿ ಅಧ್ಯಕ್ಷರುಗಳಿಗೆ ಸಂಪುಟ ಕಾರ್ಯದರ್ಶಿಗಳು ಮುಂತಾದ ಕಾರ್ಯನಿರ್ವಾಹಕ ಇಲಾಖೆಯ ಮುಖ್ಯಸ್ಥರುಗಳಿಗೆ ನೀಡುವ ವಾರ್ಷಿಕ ವೇತನಕ್ಕೆ ಸಮವಾದ ಪಿಂಚಣಿಯನ್ನು ಜೀವಮಾನ ಪೂರ್ತಿ ನೀಡಲಾಗುತ್ತದೆ. ಈ ವೇತನಕ್ಕೆ ತೆರಿಗೆ ವಿಧಿಸಲಾಗುತ್ತದೆ. ಪ್ರಸಕ್ತ ಮಾಜಿ ಅಧ್ಯಕ್ಷರು ಪಡೆಯುವ ವಾರ್ಷಿಕ ಪಿಂಚಣಿ 2,05,700 ಡಾಲರ್ (ಸುಮಾರು 1.41 ಕೋಟಿ ರೂಪಾಯಿ). ಮಾಜಿ ಅಧ್ಯಕ್ಷರು ಮೃತಪಟ್ಟರೆ ಅವರ ಪತ್ನಿಗೆ ಜೀವಮಾನ ಪೂರ್ತಿ ವಾರ್ಷಿಕ 20,000 ಡಾಲರ್ (ಸುಮಾರು 13.67 ಲಕ್ಷ ರೂಪಾಯಿ) ಪಿಂಚಣಿ ನೀಡಲಾಗುತ್ತದೆ.

►ಪರಿವರ್ತನೆ

ಖಾಸಗಿ ಬದುಕಿಗೆ ಪರಿವರ್ತನೆ ಹೊಂದಲು ಮಾಜಿ ಅಧ್ಯಕ್ಷಕರುಗಳಿಗೆ ನೆರವು ನೀಡುವುದಕ್ಕಾಗಿ ಪರಿವರ್ತನೆ ವೆಚ್ಚವನ್ನು ನೀಡಲಾಗುತ್ತದೆ. ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರಕ್ಕೆ ಒಂದು ತಿಂಗಳ ಮುನ್ನ ಪರಿವರ್ತನೆ ಭತ್ತೆ ಆರಂಭವಾಗುತ್ತದೆ ಹಾಗೂ ಮೊದಲ ಏಳು ತಿಂಗಳವರೆಗೆ ನೀಡಲಾಗುತ್ತದೆ. ಕಚೇರಿ ಹೊಂದಲು, ಸಿಬ್ಬಂದಿಗೆ ಪರಿಹಾರ ನೀಡಲು, ಸಂಪರ್ಕ ಸೇವೆಗಳು ಹಾಗೂ ಪರಿವರ್ತನೆಗೆ ಸಂಬಂಧಿಸಿದ ಮುದ್ರಣ ಮತ್ತು ಅಂಚೆ ವೆಚ್ಚಗಳಿಗಾಗಿ ಈ ಭತ್ತೆಯನ್ನು ಒದಗಿಸಲಾಗುತ್ತದೆ.

►ಸಿಬ್ಬಂದಿ ಮತ್ತು ಕಚೇರಿ ಭತ್ತೆ

ಕಚೇರಿ ಸಿಬ್ಬಂದಿ ನೇಮಕಕ್ಕಾಗಿ ಮಾಜಿ ಅಧ್ಯಕ್ಷರುಗಳಿಗೆ ಅಧಿಕಾರದಿಂದ ಕೆಳಗಿಳಿದ ಬಳಿಕ ಆರು ತಿಂಗಳವರೆಗೆ ಭತ್ತೆ ನೀಡಲಾಗುತ್ತದೆ. ಮೊದಲ 30 ತಿಂಗಳ ಅವಧಿಯಲ್ಲಿ ಅವರು ವಾರ್ಷಿಕ ಗರಿಷ್ಠ 1.5 ಲಕ್ಷ ಡಾಲರ್ (ಸುಮಾರು 1.02 ಕೋಟಿ ರೂಪಾಯಿ) ಪಡೆಯಲು ಅರ್ಹತೆ ಹೊಂದಿದ್ದಾರೆ.

►ಪ್ರಯಾಣ ಭತ್ತೆ

ಮಾಜಿ ಅಧ್ಯಕ್ಷರ ನೆಲೆಯಲ್ಲಿ ಅಮೆರಿಕ ಸರಕಾರದ ಅಧಿಕೃತ ಪ್ರತಿನಿಧಿಯಾಗಿ ಅವರು ಮಾಡುವ ಯಾವುದೇ ಪ್ರಯಾಣಕ್ಕೆ ನಿಧಿ ಒದಗಿಸಲಾಗುತ್ತದೆ. ಅವರು ತನ್ನ ಜೊತೆ ಇಬ್ಬರಿಗಿಂತ ಹೆಚ್ಚಿನ ಸಿಬ್ಬಂದಿಯನ್ನು ಕರೆದೊಯ್ಯಬಾರದು.

►ಗುಪ್ತಚರ ಸೇವೆ ರಕ್ಷಣೆ

ಮಾಜಿ ಅಧ್ಯಕ್ಷರು ಮತ್ತು ಅವರ ಸಂಗಾತಿಗಳು ಜೀವಮಾನ ಪೂರ್ತಿ ಗುಪ್ತಚರ ಸೇವೆಯ ರಕ್ಷಣೆ ಪಡೆಯಲು ಅರ್ಹರಾಗಿದ್ದಾರೆ.

►ವೈದ್ಯಕೀಯ ವೆಚ್ಚಗಳು

ಮಾಜಿ ಅಧ್ಯಕ್ಷರು, ಅವರ ಸಂಗಾತಿಗಳು, ವಿಧವೆಯರು ಮತ್ತು ಅಪ್ರಾಪ್ತ ಮಕ್ಕಳಿಗೆ ಸೇನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು.

►ಸರಕಾರಿ ಅಂತ್ಯಸಂಸ್ಕಾರಗಳು

ಮಾಜಿ ಅಧ್ಯಕ್ಷರು ಮರಣ ಹೊಂದಿದರೆ, ಅವರ ಅಂತ್ಯಸಂಸ್ಕಾರಗಳನ್ನು ಸಾಂಪ್ರದಾಯಿಕವಾಗಿ ಸರಕಾರಿ ಗೌರವದೊಂದಿಗೆ ನೆರವೇರಿಸಲಾಗುವುದು.

ಮಾಜಿ ಅಧ್ಯಕ್ಷರು ಎಷ್ಟು ಗಳಿಸಿದ್ದಾರೆ ?

ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅಧಿಕಾರದಿಂದ ಕೆಳಗಿಳಿದ ಬಳಿಕದ ಆರು ವರ್ಷಗಳಲ್ಲಿ ಸಾರ್ವಜನಿಕ ಭಾಷಣಗಳನ್ನು ಮಾಡಿ 40 ಮಿಲಿಯ ಡಾಲರ್ (ಸುಮಾರು 273 ಕೋಟಿ ರೂಪಾಯಿ)ಗೂ ಅಧಿಕ ಹಣ ಸಂಪಾದಿಸಿದ್ದಾರೆ ಎಂದು ವರದಿಯಾಗಿದೆ.

ಜಾರ್ಜ್ ಬುಶ್ 2009ರ ಬಳಿಕ 100ಕ್ಕೂ ಅಧಿಕ ಭಾಷಣಗಳನ್ನು ಮಾಡಿದ್ದಾರೆ. ಅವರು ಪ್ರತಿ ಭಾಷಣಕ್ಕೆ 1 ಲಕ್ಷ ಡಾಲರ್ (ಸುಮಾರು 68 ಲಕ್ಷ ರೂಪಾಯಿ)ಗೂ ಅಧಿಕ ಶುಲ್ಕ ವಸೂಲು ಮಾಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News