ತಿಂಗಳ ಬಳಿಕ ಬೆಳಕಿಗೆ ಬಂದ ಕೊಲೆ ಪ್ರಕರಣ : 8 ಆರೋಪಿಗಳ ಬಂಧನ
ಉಡುಪಿ, ಜ.11: ಪರ್ಕಳದ ಸಣ್ಣಕ್ಕಿಬೆಟ್ಟುವಿನ ಸಂತೋಷ್ ನಾಯಕ್ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಇದಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಈ ವಿಷಯ ತಿಳಿಸಿದರು.
ಬಂಧಿತರನ್ನು ಯರ್ಲಪಾಡಿಯ ಪ್ರಸಾದ್(23), ಮಂಗಳೂರು ಕೃಷ್ಣಾಪುರ ನಿವಾಸಿ ದಯಾನಂದ(37), ಉಡುಪಿಯ ವಿಲ್ಫ್ರೇಡ್ ಅರ್ಥರ್ ಯಾನೆ ವಿನ್ನು(40), ಹಿರಿಯಡ್ಕದ ಜಯಂತ್ ಪೈ(55), ಪೆರ್ಣಂಕಿಲದ ಕೃಷ್ಣ(33), ರಮೇಶ್(35), ಮರ್ಣೆಯ ಮಹೇಶ್ ಆಚಾರಿ(23), ಕೊಡಿಬೆಟ್ಟುವಿನ ಪ್ರಕಾಶ್ ಮೂಲ್ಯ(29) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ನಿತ್ಯಾನಂದ ನಾಯಕ್ ತಲೆಮರೆಸಿಕೊಂಡಿದ್ದಾರೆ.
ಡಿ.2ರಂದು ಸಂತೋಷ್ ನಾಯಕ್ ನಾಪತ್ತೆಯಾಗಿದ್ದು, ಅವರನ್ನು ಕೊಲೆಯಾಗಿದ್ದ ರೌಡಿ ವರ್ವಾಡಿ ಪ್ರವೀಣ್ ಕುಲಾಲ್ ಇತರರೊಂದಿಗೆ ಸೇರಿ ಕೊಲೆ ಮಾಡಿ ಶವವನ್ನು ನಾಶ ಮಾಡಿರುವುದಾಗಿ ಸಂತೋಷ್‌ರ ಪತ್ನಿ ಸುಮಿತ್ರಾ ಜ.4ರಂದು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರಹಿಂಸೆ ನೀಡಿ ಕೊಲೆ:
5-6ವರ್ಷಗಳ ಹಿಂದೆ ನಿತ್ಯಾನಂದ ನಾಯಕ್, ಜಯಂತ್ ಪೈ ಮತ್ತು ವಿಲ್ಪ್ರೆಡ್ ಅರ್ಥರ್ ಅವರಿಂದ ಲಕ್ಷಾಂತರ ರೂ. ಹಣ ಪಡೆದುಕೊಂಡಿದ್ದ ಸಂತೋಷ್ ನಾಯಕ್ ಹಣವನ್ನು ವಾಪಾಸ್ಸು ಕೊಡದೆ ಸತಾಯಿಸುತ್ತಿದ್ದ. ನಿತ್ಯಾನಂದ ಅವರಿಂದ 40ಲಕ್ಷ ರೂ. ಮತ್ತು ಪೈಯವರಿಂದ 70ಲಕ್ಷ ರೂ. ಪಡೆದುಕೊಂಡಿದ್ದ. ಹಣ ವಾಪಾಸ್ಸು ಕೊಡದ ಬಗ್ಗೆ ಬೇಸತ್ತಿದ್ದ ಈ ಮೂವರು ಹಣವನ್ನು ವಸೂಲು ಮಾಡಿ ಕೊಡುವಂತೆ ವರ್ವಾಡಿ ಪ್ರವೀಣ್ ಕುಲಾಲ್‌ನಿಗೆ ತಿಳಿಸಿದ್ದರು.
ಅದರಂತೆ ಪ್ರವೀಣ್ ಕುಲಾಲ್ ಡಿ.2ರಂದು ಬೆಳಗ್ಗೆ ಸಂತೋಷ ನಾಯಕ್ ನನ್ನು ಕುದಿಯಲ್ಲಿರುವ ಆತನ ಹೆಂಡತಿ ಮನೆಯಿಂದ ಅಪಹರಣ ಮಾಡಿ ವರ್ವಾಡಿಗೆ ಕರೆದುಕೊಂಡು ಬಂದು, ಅಲ್ಲಿ ತನ್ನ ಸಹಚರರೊಂದಿಗೆ ಸೇರಿ ಸಂತೋಷ್‌ಗೆ ಹಿಂಸೆ ನೀಡಿ ಹಣ ಎಲ್ಲಿ ಇದೆ ಎಂಬುದಾಗಿ ಬಾಯಿ ಬಿಡಿಸಲು ಪ್ರಯತ್ನಿಸಿದ್ದನು. ಅಲ್ಲದೆ ಸ್ಥಳಕ್ಕೆ ನಿತ್ಯಾನಂದ, ಜಯಂತ್ ಪೈ, ವಿನ್ನು ಅವರನ್ನು ಕರೆಯಿಸಿ ಅವರ ಮುಂದೆಯೂ ಸಂತೋಷ್‌ಗೆ ಹೊಡೆದು ಬಾಯಿ ಬಿಡಿಸಲು ಪ್ರಯತ್ನಿಸಿದ್ದನು. ಇವರ ಚಿತ್ರಹಿಂಸೆಗೆ ಸಂತೋಷ್ ನಾಯಕ್ ಸ್ಥಳದಲ್ಲೇ ಮೃತಪಟ್ಟಿದ್ದನು.
ಅದೇ ದಿನ ರಾತ್ರಿ ಸಣ್ಣಕ್ಕಿಬೆಟ್ಟಿನಲ್ಲಿರುವ ಸಂತೋಷ್ ನಾಯಕ್ ಮನೆಗೆ ಬಂದ ಪ್ರವೀಣ್ ಕುಲಾಲ್ ಹಾಗೂ ಆತನ ಸಹಚರರು ಮನೆಯ ಬಾಗಿಲು ಒಡೆದು ಒಳನುಗ್ಗಿ ಮನೆಯ ಕಪಾಟುಗಳನ್ನು ಒಡೆದು ಹಣವನ್ನು ಹುಡುಕಿದ್ದರು. ನಂತರ ಮನೆಯ ಮುಂದಿರುವ ದೇವರ ಗುಡಿಯ ಪೀಠವನ್ನು ಅಗೆದು ತಪಾಸಣೆ ನಡೆಸಿದ್ದರು.
ಆದರೆ ಅವರಿಗೆ ಯಾವುದೇ ಹಣ ಸಿಕ್ಕಿರಲಿಲ್ಲ. ಬಳಿಕ ಮನೆಯಲ್ಲಿದ್ದ ಸಂತೋಷ್ ನಾಯಕ್‌ನ ಪತ್ನಿ ಸುಮಿತ್ರಾ, ತಾಯಿ ರತ್ನಾವತಿ ನಾಯಕ್, ತಮ್ಮ ವಿದ್ಯಾಧರ, ತಮ್ಮನ ಹೆಂಡತಿ ಶೋಭ ಮತ್ತು ಮಕ್ಕಳನ್ನು ಹೆದರಿಸಿ ಬಲಾತ್ಕಾರವಾಗಿ ಕಾರಿನಲ್ಲಿ ವರ್ವಾಡಿಗೆ ಕರೆದುಕೊಂಡು ಹೋಗಿ ಅವರಿಂದಲು ಹಣವಿರುವ ಬಗ್ಗೆ ಬಾಯಿ ಬಿಡಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಅವರೂ ಕೂಡ ಬಾಯಿ ಬಿಡಲಿಲ್ಲ. ಅದಕ್ಕೆ ಅವರಲ್ಲಿರುವ ಕರಿಮಣಿ ಸರ, ಉಂಗುರ, ಮಕ್ಕಳ ಕಾಲು ಚೈನ್ ಕಿತ್ತುಕೊಂಡು ವಾಪಾಸು ಎಲ್ಲರನ್ನು ಸಣ್ಣಕ್ಕಿಬೆಟ್ಟುವಿಗೆ ಬಿಟ್ಟು ಹೋಗಿದ್ದಾರೆ.
ಶವವನ್ನು ಬಾವಿಯಲ್ಲಿ ಹೂತರು:
ಅಲ್ಲಿಂದ ರಾತ್ರಿಯೇ ಮೃತದೇಹ ಇರುವ ವರ್ವಾಡಿಗೆ ಬಂದ ಇವರು ಮೃತದೇಹದ ಕಾಲುಗಳನ್ನು ಕತ್ತರಿಸಿ ಗೋಣಿಚೀಲಕ್ಕೆ ತುಂಬಿ ಮೃತದೇಹವನ್ನು ಪರ್ಣಂಕಿಲ ಕಾಡಿನಲ್ಲಿರುವ 7-8 ಅಡಿ ಆಳದ ಒಂದು ಪಾಳು ಬಾವಿಯಲ್ಲಿ ಹೂತು ಹಾಕಿದರು.
ಪೊಲೀಸರನ್ನು ಹಾದಿ ತಪ್ಪಿಸುವ ನಿಟ್ಟಿನಲ್ಲಿ ಆರೋಪಿಗಳು ಅಲ್ಲೇ ಸಮೀಪ ಕರುವೊಂದನ್ನು ಸುಟ್ಟಿ ಹಾಕಿ, ಎಲುಬು ಬೂದಿಯನ್ನು ಅಲ್ಲೇ ಬಿಟ್ಟು ಹೋಗಿದ್ದರು. ಇಲ್ಲಿರುವ ಮೂಳೆ ಮನುಷ್ಯರದ್ದಲ್ಲ ಎಂಬುದು ಡಿಎನ್‌ಎ ಪರೀಕ್ಷೆ ಯಿಂದ ಸಾಬೀತಾದರೆ ಇಡೀ ಪ್ರಕರಣ ಮುಚ್ಚಿ ಹೋಗಬಹುದೆಂಬುದು ಆರೋಪಿಗಳ ಲೆಕ್ಕಾಚಾರವಾಗಿತ್ತು.
ಕೃತ್ಯಕ್ಕೆ ಬಳಸಿದ ಕಾರು, ಹಗ್ಗಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಬಾವಿಯಲ್ಲಿದ್ದ ಶವವನ್ನು ಇಂದು ಮಧ್ಯಾಹ್ನ ಹೊರ ತೆಗೆಯಲಾಯಿತು. ವಿಚಾರಣೆ ವೇಳೆ ಬಂಧಿತ ಆರೋಪಿಗಳ ಇತರ ಕೊಲೆ ಸಂಚುಗಳು ಕೂಡ ಬೆಳಕಿಗೆ ಬಂದಿವೆ. ಬಂಧಿತ ಆರೋಪಿಗಳಲ್ಲಿ ದಯಾನಂದ ಹಾಗೂ ಪ್ರಸಾದ್ ಅವರನ್ನು ಗುರುತಿಸುವ ಕಾರ್ಯ ಬಾಕಿ ಇದೆ.
ಪೊಲೀಸ್ ತಂಡಕ್ಕೆ ಐಜಿಪಿ ಬಹುಮಾನವನ್ನು ಘೋಷಿಸಿದ್ದಾರೆ ಎಂದು ಎಸ್ಪಿ ಬಾಲಕೃಷ್ಣ ತಿಳಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಉಪಸ್ಥಿತರಿದ್ದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಮಾರ್ಗದರ್ಶನದಂತೆ ಡಿವೈಎಸ್ಪಿ ಕುಮಾರಸ್ವಾಮಿ ನಿರ್ದೇಶನದಂತೆ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ ಕೆ., ಉಡುಪಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್, ಹಿರಿಯಡ್ಕ ಠಾಣಾಧಿಕಾರಿ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿಯವರು ಈ ಕಾರ್ಯಾಚರಣೆ ನಡೆಸಿದ್ದಾರೆ.