×
Ad

ನಿನಗೆ ಹೀಗಾಗಿದ್ದರೆ ಏನು ಮಾಡುತ್ತಿದ್ದೆ ?:ಅತ್ಯಾಚಾರ ಸಂತ್ರಸ್ತೆಯ ಗೆಳತಿಗೆ ವಕೀಲನ ಪ್ರಶ್ನೆ

Update: 2017-01-11 19:53 IST

ಪಟ್ನ, ಜ.11: ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಅದ್ಹೇಗೆ ಹೇಳುತ್ತೀ..ರಕ್ತ ಎಲ್ಲಿಂದ ಹೊರ ಬಂದಿದೆ..? ಸ್ಪಷ್ವವಾಗಿ ಉತ್ತರಿಸಬೇಕು. ಒಂದು ವೇಳೆ ನಿನ್ನ ಮೇಲೆ ಆತ ಅತ್ಯಾಚಾರ ಮಾಡಿದ್ದರೆ ಏನು ಮಾಡುತ್ತಿದ್ದೆ..?

 ಹೀಗೆಂದು ಅಮಾನವೀಯವಾಗಿ ಪ್ರಶ್ನಿಸಿದವರು ಬಿಹಾರದ ಓರ್ವ ವಕೀಲ. ಬಿಹಾರದ ವೈಶಾಲಿ ಎಂಬಲ್ಲಿ ರಾಜ್ಯ ಸರಕಾರದ ಅಧೀನದ ಬಾಲಕಿಯರ ಹಾಸ್ಟೆಲ್‌ನಲ್ಲಿ 10ನೇ ತರಗತಿಯ ಬಾಲಕಿಯೋರ್ವಳ ಅರೆನಗ್ನ ಮೃತದೇಹ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಮಿತ್ರಪಕ್ಷ ಲೋಕ ಸಮತಾ ಪಾರ್ಟಿಗೆ ಸೇರಿದ ವಕೀಲ ಲಲನ್ ಪಾಸ್ವಾನ್ ಈ ಹಾಸ್ಟೆಲ್‌ಗೆ ಭೇಟಿ ನೀಡಿ ಘಟನೆಯ ಬಗ್ಗೆ ವಿವರ ಪಡೆದುಕೊಳ್ಳುತ್ತಿದ್ದರು. ಈ ಸಂದರ್ಭ ಸಂತ್ರಸ್ತ ಬಾಲಕಿಯ ಸ್ನೇಹಿತೆಯನ್ನುದ್ದೇಶಿಸಿ ಈ ಮೇಲಿನ ‘ಅಣಿಮುತ್ತು’ಗಳನ್ನು ಉದುರಿಸಿದ್ದಾರೆ ಪಾಸ್ವಾನ್. ಈ ಘಟನಾವಳಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನೀನೊಬ್ಬಳು ವಿದ್ಯಾವಂತೆ. ಸ್ಪಷ್ಟವಾಗಿ ಉತ್ತರಿಸಬೇಕು. ಇಲ್ಲದಿದ್ದರೆ ನಾಳೆ ನಿನ್ನ ಮೇಲೂ ಇದೇ ರೀತಿ ಅತ್ಯಾಚಾರ ನಡೆಯಬಹುದು. ಅತ್ಯಾಚಾರಿ ನಿನ್ನ ಕೋಣೆಗೆ ಬಂದ ಎಂದು ಭಾವಿಸಿಕೊಳ್ಳು. ಆಗೇನು ಮಾಡುತ್ತೀ.. ಎಂಬ ಈ ವಕೀಲನ ಮಾತಿಗೆ ಆ ಬಾಲಕಿಯರು ಮುಜುಗುರ ಪಟ್ಟುಕೊಳ್ಳುವಂತಾಯಿತು. ಈ ಕೊಲೆಗಾರ ಇಲ್ಲಿರುವ ಕೆಲ ಹುಡುಗಿಯರ ಪರಿಚಯಸ್ಥನಾಗಿರಬಹುದು ಎಂದ ಪಾಸ್ವಾನ್, ಅಲ್ಲಿಯೇ ನಿಂತಿದ್ದ ಓರ್ವ ಶಿಕ್ಷಕರನ್ನುದ್ದೇಶಿಸಿ- ನೀವೂ ಸೇರಿದಂತೆ ಯಾರಾದರೊಬ್ಬರು ಅತ್ಯಾಚಾರಿಗೆ ಬಾಲಕಿಯರ ಹಾಸ್ಟೆಲ್ ಒಳನುಗ್ಗಲು ನೆರವಾಗಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಹಾಸ್ಟೆಲ್‌ನ ಬಾಲಕಿಯರು ಬಾಲಕರೊಂದಿಗೆ ಬೆರೆಯುತ್ತಿದ್ದಾರೆ ಎಂದು ಆಪಾದಿಸಿದ ಪಾಸ್ವಾನ್, ತನಗೊಂದು ಅವಕಾಶ ಕೊಟ್ಟರೆ ಈ ಬಾಲಕಿಯರನ್ನು ಚೆನ್ನಾಗಿ ವಿಚಾರಿಸಿಕೊಂಡು ಬಾಯಿ ಬಿಡಿಸುತ್ತೇನೆ . ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮುಖದಲ್ಲಿ ಬೆವರಿಳಿಸುವಷ್ಟು ತಾಕತ್ತು ತನಗಿದೆ ಎಂದಿದ್ದಾರೆ.

 ಈ ವಿಡಿಯೋ ದೃಶ್ಯ ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಇದನ್ನು ಸಮರ್ಥಿಸಿಕೊಂಡಿರುವ ಪಾಸ್ವಾನ್, ತಾನು ಹೇಳಿದ ರೀತಿ ತಪ್ಪಿರಬಹುದು, ಆದರೆ ತನ್ನ ್ಠಉದ್ದೇಶ ಸರಿಯಾಗಿಯೇ ಇದೆ. ದಲಿತ ಬಾಲಕಿಯರ ಸನಿವಾಸ ಶಾಲೆಯಿದು. ಇಲ್ಲಿಯ ಬಾಲಕಿಯರಿಗೆ ನೆರವಾಗುವ ಉದ್ದೇಶದಿಂದ ತಾನು ಬಂದಿದ್ದೇನೆ. ತನ್ನ ಹೇಳಿಕೆಯನ್ನು ವಿಡಿಯೋ ದೃಶ್ಯಾವಳಿಯಲ್ಲಿ ತಿರುಚಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News