ತೇಜ್ ಬಹಾದೂರ್ ಸತ್ಯವನ್ನೇ ಹೇಳಿದ್ದಾನೆ: ಕುಟುಂಬ ವರ್ಗ

Update: 2017-01-11 15:14 GMT

ಹೊಸದಿಲ್ಲಿ, ಜ.11: ಗಡಿ ಕಾಯುವ ಯೋಧರಿಗೆ ಕಳಪೆ ಆಹಾರ ಪೂರೈಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದ ಬಿಎಸ್‌ಎಫ್ ಜವಾನ ತೇಜ್‌ಬಹಾದೂರ್ ಯಾದವ್ ನೆರವಿಗೆ ನಿಂತಿರುವ ಆತನ ಕುಟುಂಬ ವರ್ಗ, ಆತ ಸತ್ಯವನ್ನೇ ಹೇಳಿದ್ದಾನೆ ಎಂದಿದೆ. ಈ ಮಧ್ಯೆ, ಘಟನೆಯ ಬಗ್ಗೆ ಪಡೆಯಲಾದ ಮಧ್ಯಂತರ ವರದಿಯಲ್ಲಿ ಕೆಲವು ‘ವಿಷಯಗಳು’ ಕಂಡು ಬಂದಿವೆ ಎಂದು ಕೇಂದ್ರದ ಗೃಹ ಇಲಾಖೆ ತಿಳಿಸಿದೆ.

  ಆತ ಮಾಡಿದ್ದರಲ್ಲಿ ತಪ್ಪೇನಿಲ್ಲ. ಆತ ಸತ್ಯದ ದರ್ಶನ ಮಾಡಿಕೊಟ್ಟಿದ್ದಾನೆ. ಉತ್ತಮ ಆಹಾರಕ್ಕಾಗಿ ಬೇಡಿಕೆ ಸಲ್ಲಿಸಿದ್ದಾನೆ ಅಷ್ಟೇ. ಆದರೆ ಆತನಿಗೆ ಮಾನಸಿಕ ಸಮಸ್ಯೆಯಿದೆ ಎಂದು ಹೇಳುತ್ತಿರುವುದು ಸರಿಯಲ್ಲ. ಸಮಸ್ಯೆಯಿದ್ದರೆ ಆತನನ್ನು ಗಡಿ ಕಾಯುವ ಕಾರ್ಯಕ್ಕೆ ನಿಯೋಜಿಸುತ್ತಿದ್ದರೇ. ಹಾಗಾದರೆ ಆತನನ್ನು ಚಿಕಿತ್ಸೆಗೆ ಯಾಕೆ ಕಳಿಸಿಲ್ಲ ಎಂದು ಆತನ ಪತ್ನಿ ಪ್ರಶ್ನಿಸುತ್ತಾರೆ.

ಅಲ್ಲಿ (ಗಡಿಯಲ್ಲಿ) ಪರಿಸ್ಥಿತಿ ಹೇಗಿದೆ. ನಮ್ಮ ಯೋಧರು ಯಾವ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ನನ್ನ ತಂದೆ ವಾಸ್ತವಾಂಶ ತೆರೆದಿಟ್ಟಿದ್ದಾರೆ. ತನಿಖೆ ನಡೆದು ನ್ಯಾಯ ಸಿಗಬೇಕು ಎಂಬುದಷ್ಟೇ ನಮ್ಮ ಕೋರಿಕೆಯಾಗಿದೆ ಎಂದು ಯೋಧನ ಪುತ್ರ ಹೇಳಿದ್ದಾನೆ.

 ಈ ಮಧ್ಯೆ , ಘಟನೆಯ ಬಗ್ಗೆ ಮಧ್ಯಂತರ ವರದಿ ಕೈ ಸೇರಿದೆ. ಇಲ್ಲಿ ಕೆಲವು ವಿಷಯಗಳಿವೆ. ಈ ಬಗ್ಗೆ ತನಿಖೆ ಮುಗಿಯಲಿ. ಆದರೆ ಇದನ್ನು ವಿವಾದವನ್ನಾಗಿ ಮಾಡಬೇಡಿ ಎಂದು ದೇಶದ ಜನರಲ್ಲಿ ಮತ್ತು ಮಾಧ್ಯಮದವರಲ್ಲಿ ವೈಯಕ್ತಿಕವಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ . ಇದನ್ನೊಂದು ದೊಡ್ಡ ವಿವಾದ ಎಂದು ಬಿಂಬಿಸುವ ಮೂಲಕ ಯೋಧರ ನೈತಿಕ ಸ್ಥೈರ್ಯಕ್ಕೆ ಘಾಸಿ ಮಾಡಬಾರದು ಎಂದು ಗೃಹ ಇಲಾಖೆಯ ಉಪ ಸಚಿವ ಕಿರಣ್ ರೆಜಿಜು ಹೇಳಿದ್ದಾರೆ. ಬಿಎಸ್‌ಎಫ್‌ನ ಡಿಐಜಿ ಶ್ರೇಣಿಯ ಅಧಿಕಾರಿಯೋರ್ವರು ಸಿದ್ದಪಡಿಸಿರುವ ಪೂರ್ಣ ವರದಿ ಇಂದು ಸರಕಾರದ ಕೈ ಸೇರುವ ನಿರೀಕ್ಷೆಯಿದೆ.

 ಬಿಎಸ್‌ಎಫ್ ಯೋಧ ತನ್ನ ಅಳಲು ತೋಡಿಕೊಳ್ಳುತ್ತಿರುವ ವಿಡಿಯೋ ದೃಶ್ಯಾವಳಿ ಗಮನಿಸಿದ್ದೇನೆ. ಈ ಬಗ್ಗೆ ತಕ್ಷಣ ವರದಿ ತರಿಸಿಕೊಳ್ಳುವಂತೆ ಗೃಹ ಕಾರ್ಯದರ್ಶಿಗೆ ಸೂಚಿಸಲಾಗಿದ್ದು ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಅಶಿಸ್ತಿನ ನಡವಳಿಕೆ ಮತ್ತು ಹಿರಿಯ ಅಧಿಕಾರಿಗೆ ಬಂದೂಕು ಗುರಿ ಇರಿಸಿದ ಆರೋಪದ ಮೇಲೆ ತೇಜ್ ಬಹಾದೂರ್ ಯಾದವ್‌ನನ್ನು 2010ರಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು ಎಂದು ಬಿಎಸ್‌ಎಫ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News