×
Ad

ಬೆಳ್ತಂಗಡಿ ದುರಂತ : ಫಕೀರ್ಣಕಟ್ಟೆ, ಬೆಳಪುವಿನ ಮನೆಯಲ್ಲಿ ಮುಗಿಲು ಮುಟ್ಟಿದ ರೋದನ

Update: 2017-01-11 20:54 IST

ಪಡುಬಿದ್ರಿ , ಜ.11 : ಬೆಳ್ತಂಗಡಿಯ ಕಾಜೂರಿನ ಹೊಳೆಯಲ್ಲಿ ಸ್ನಾನಕ್ಕೆಂದು ಹೊಳೆಗೆ ಇಳಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಕುಟುಂಬದ ಮನೆಯಾದ ಬೆಳಪು ಮತ್ತು ಫಕೀರ್ಣಕಟ್ಟೆಯ ನೀರವ ಮೌನ ಆವರಿಸಿದೆ.

ಸುದ್ದಿ ತಿಳಿಯುತಿದ್ದಂತೆಯೇ ಮೃತ ರಹೀಮ್ ಅವರ ಊರಾದ ಬೆಳಪುವಿನಲ್ಲಿ ಹಾಗೂ ಅವರ ಪತ್ನಿ ರುಬೀನಾ ಅವರ ಊರಾದ ಸಮೀಪದ ಫಕೀರ್ಣಕಟ್ಟೆಯ ಮನೆಯ ಬಳಿ ಪರಿಸರದಲ್ಲಿ ಅಲ್ಲಲ್ಲಿ ಜನ ಜಮಾಯಿಸಿದ್ದಾರೆ. ಇಡೀ ಊರೇ ಘಟನೆಯ ಸುದ್ದಿ ತಿಳಿದು ಬೆಚ್ಚಿಬಿದ್ದಿದೆ.

ರಹೀಮ್ ಎಂಬವರು ಬೆಳಪುವಿನ ಗ್ರಾಮ ಪಂಚಾಯ್ತಿ ಕಚೇರಿಯ ಎದುರಿನ ನಿವಾಸಿಯಾಗಿದ್ದಾರೆ. ಸಮೀಪದ ಫಕೀರ್ಣಕಟ್ಟೆಯ ನಿವಾಸಿ ರುಬೀನಾ ಅವರನ್ನು ಸುಮಾರು ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಹರಕೆ ತೀರಿಸಲೆಂದು ಬುಧವಾರ ಬೆಳಿಗ್ಗೆ ಕುಟುಂಬ ಸಮೇತರಾಗಿ ಕಾಜೂರು ದರ್ಗಾಕ್ಕೆ ಬೆಳಿಗ್ಗೆ 9.30ಗಂಟೆಗೆ ಕಾರಿನಲ್ಲಿ ತೆರಳಿದ್ದರು.ಈ ವೇಳೆ ರಹೀಮ್, ಪತ್ನಿ ರುಬೀನಾ, ಸಹೋದರಿ ಯಾಸ್ಮೀನ್, ಇನ್ನೋರ್ವ ಸಹೋದರಿಯ ಪುತ್ರ ಶುಬಾನ್, ತಾಯಿ ಮೈಮುನಾ, ಸುಲೈಲಾ, ರಹೀಮ್‌ನ ಮಗು ರಿಝ್ಮೋ ಫಾತಿಮಾ ಇದ್ದರು.

 ದರ್ಗಾಕ್ಕೆ ತೆರಳಿದ ಬಳಿಕ ಸಮೀಪದಲ್ಲೇ ಇದ್ದ ಹೊಳೆಗೆ ಇಳಿದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ರಹೀಮ್ ಈ ಹಿಂದೆ ಖಾಸಗಿ ಬಸ್ಸಿನಲ್ಲಿ ಬದಲಿ ಚಾಲಕನಾಗಿ ತೆರಳುತಿದ್ದ. ಆದರೆ ಇತ್ತೀಚೆಗೆ ಉಡುಪಿಯ ಸಂತೋಷ್ ನಗರ ಎಂಬಲ್ಲಿ ತಂಪು ಪಾನೀಯದ ಘಟಕವೊಂದನ್ನು ನಡೆಸುತಿದ್ದನು.

ರಹೀಂ ತಾಯಿ, ಇಬ್ಬರು ಸಹೋದರ, ಓರ್ವ ಸಹೋದರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News