ಗುರುವಾರ ದಿವಿತ್ ರೈ ಶಾಲೆಗೆ ಗೃಹಸಚಿವರ ಭೇಟಿ

Update: 2017-01-11 17:10 GMT

ಪುತ್ತೂರು , ಜ.11 : ತನ್ನ ಶಾಲೆಯ ನಾಲ್ವರು ಶಿಕ್ಷಕರನ್ನು ಏಕಕಾಲದಲ್ಲಿ ಇಲಾಖೆ ವರ್ಗಾವಣೆ ಮಾಡಿದ್ದಾಗ ಅದರ ವಿರುದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಮೊಬೈಲ್ ಮೂಲಕ ಮೆಸೇಜ್ ಮಾಡಿ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದ ಪುತ್ತೂರು ನಗರದ ಹಾರಾಡಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ದಿವಿತ್ ರೈ ಶಾಲೆಗೆ ಇದೀಗ ಗೃಹ ಸಚಿವರು ಆಗಮಿಸಲಿದ್ದಾರೆ.

ಗುರುವಾರ ಹಾರಾಡಿ ಶಾಲೆಗೆ ಆಗಮಿಸಲಿರುವ ಗೃಹ ಸಚಿವರು ಇಲ್ಲಿ ನಡೆಯಲಿರುವ ‘ಹೇಮಂತದ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

 ಕಳೆದ ಜುಲೈ ತಿಂಗಳಲ್ಲಿ ಈ ಸರ್ಕಾರಿ ಶಾಲೆಯಲ್ಲಿನ ನಾಲ್ವರು ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿತ್ತು. ಇದನ್ನು ತಡೆಯುವಂತೆ ಇಲ್ಲಿನ ವಿದ್ಯಾರ್ಥಿ ದಿವಿತ್ ರೈ ಗೃಹ ಸಚಿವರಿಗೆ ತನ್ನ ತಾಯಿಯ ಮೊಬೈಲ್‌ನಲ್ಲಿ ಮೆಸೇಜ್ ಮಾಡಿ ವಿನಂತಿಸಿದ್ದ. ಇದಕ್ಕೆ ಸ್ಪಂಧಿಸಿದ ಸಚಿವರು ದಿವಿತ್ ಅವರ ತಾಯಿ ಪ್ರತಿಮಾ ಯು. ರ್ಯ ಅವರ ಮೊಬೈಲ್‌ಗೆ ಕರೆ ಮಾಡಿ ನಿಮ್ಮ ಶಾಲೆಯಲ್ಲಿನ ಶಿಕ್ಷಕರನ್ನು ವರ್ಗಾವಣೆ ಮಾಡದಂತೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದ್ದರು. ಅಲ್ಲದೆ ಈ ಬಗ್ಗೆ ಲಿಖಿತ ಇಲಾಖೆಗೆ ಅದೇಶವನ್ನೂ ನೀಡಿದ್ದರು. ದಿವಿತ್‌ನಿಂದಾಗಿ ಜಿಲ್ಲೆಯ ಎಲ್ಲಾ ಶಾಲೆಗಳ ಶಿಕ್ಷಕರ ವರ್ಗಾವಣೆಯ ಮಾನದಂಡದಲ್ಲಿ ಬದಲಾವಣೆಯಾಗಿತ್ತು.

ಆ ಬಳಿಕ ದಿವಿತ್ ರೈಯನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ ಗೃಹ ಸಚಿವರು ಆತನಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನೂ ಮಾಡಿದ್ದರು.
ಇದೀಗ ಶಾಲೆಯ ಹೇಮಂತದ ಸಂಭ್ರಮ ಕಾರ್ಯಕ್ರಮಕ್ಕೆ ಗೃಹ ಸಚಿವ ಪರಮೇಶ್ವರ್ ಅವರನ್ನು ತನ್ನ ಶಾಲೆಗೆ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಸರ್ಕಾರಿ ಶಾಲೆಯಲ್ಲಿನ ಸಣ್ಣ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸುವ ಮೂಲಕ ಗೃಹ ಸಚಿವರು ದಿವಿತ್‌ನೊಂದಿಗಿನ ಫ್ರೆಂಡ್‌ಶಿಪ್ ಗೆ ಬೆಲೆ ನೀಡಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News