ಶೃಂಗೇರಿ ಕಾಲೇಜು ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆ ಪ್ರಕರಣ ಸೂಕ್ತ ತನಿಖೆಯಾಗಲಿ: ಎಸ್. ಐ. ಓ

Update: 2017-01-11 17:42 GMT

ಮಂಗಳೂರು , ಜ.11 : ಶೃಂಗೇರಿಯ ಜೆ. ಸಿ. ಬಿ. ಎಂ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ  ವಿದ್ಯಾರ್ಥಿಯಾಗಿದ್ದ ಅಭಿಷೇಕ್(21) ಆತ್ಮಹತ್ಯೆ ಮಾಡಿರುವುದು ದುಖಃದಾಯಕವಾಗಿದೆ. ಕಾಲೇಜಿನ ಕಾರ್ಯಕ್ರಮ ಒಂದಕ್ಕೆ ಅತಿಥಿಯಾಗಿ ಯುವ ಬ್ರಿಗೇಡ್‍ನ ನಾಯಕನಾದ ಚಕ್ರವರ್ತಿ ಸೂಲಿಬೆಲೆಯವರನ್ನು ಆಮಂತ್ರಿಸಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಿರ್ಧರಿಸಿತ್ತು. ಆದರೆ, ಕೋಮುವಾದಿ ಮತ್ತು ಮಂಗಳೂರಿನ ಆರ್.ಟಿ.ಐ ಕಾರ್ಯಕರ್ತ ಬಾಳಿಗರ ಕೊಲೆಯ ಆರೋಪಿಯ ಬೆಂಬಲಿಗನೆಂಬ ನೆಲೆಯಲ್ಲಿ ಚಕ್ರವರ್ತಿ ಸೂಲಿಬೆಲೆಯನ್ನು  ಕಾರ್ಯಕ್ರವದಲ್ಲಿ ಅತಿಥಿಯಾಗಿ ಕರೆಯುವುದನ್ನು ಕಾಲೇಜಿನ ಎನ್.ಎಸ್.ಯು.ಐ ಘಟಕ ವಿರೋಧಿಸಿತ್ತು.

ಈ ಪ್ರತಿರೋಧದಿಂದ ಆಕ್ರೋಶಿತಗೊಂಡು ಎ.ಬಿ.ವಿ.ಪಿ ಯ ಅಭಿಷೇಕ್ ಸೇರಿದಂತೆ ಇತರ ನಾಲ್ವರು ಕಾರ್ಯಕರ್ತರು ಸೇರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಎನ್.ಎಸ್.ಯು.ಐ ಇದರ ಕಾರ್ಯಕರ್ತ ಕೆ. ಪಿ ಅಂಜನ್ ಎಂಬ ವಿದ್ಯಾರ್ಥಿಯು ಶೃಂಗೇರಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಐವರ ಮೇಲೆ ಅಪರಾಧಿ ಕೃತ್ಯಕ್ಕೆ ಪ್ರಚೋದನೆ ಮತ್ತು ಗಲಭೆ ಸೃಷ್ಟಿಸುವ ಕಲಂನಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದರಿಂದ ಮನನೊಂದು ಅಭೀಷೇಕ್ ತನ್ನ ತಂದೆಯನ್ನುದ್ದೇಶಿಸಿ ಪತ್ರವೊಂದನ್ನು ಬರೆದಿಟ್ಟು ಆತ್ಮಹತ್ಯೆ (11-01-2017) ಮಾಡಿಕೊಂಡಿದ್ದಾರೆ. 

ಮಂಗಳೂರಿನ ಆರ್.ಟಿ.ಐ ಕಾರ್ಯಕರ್ತ ಬಾಳಿಗರ ಕೊಲೆಯ ಆರೋಪಿಯ ಬೆಂಬಲಿಗನೆಂಬ ನೆಲೆಯಲ್ಲಿ ಆರೋಪ ಹೋತ್ತಿರುವ ಚಕ್ರವರ್ತಿ ಸೂಲಿಬೆಲೆಯನ್ನು ಕಾಲೇಜಿನ ಸೌಹಾರ್ದಮಯ ವಾತಾವರಣ ಕೆಡಿಸಲೆಂದೇ ಕರೆಯಲಾಗಿದೆಯೋ? ಇದರಲ್ಲಿ ಕಾಲೇಜು ಆಡಳಿತ ಮಂಡಳಿಯ ಮತ್ತು ಉಪನ್ಯಾಸಕರ ಕೈವಾಡವಿದೆಯೇ? ಎಂಬುವುದನ್ನು ತನಿಖೆಗೆ ಒಳಪಡಿಸಬೇಕು. ಕ್ಯಾಂಪಸ್ಸಿನಲ್ಲಿ ಪದೇ-ಪದೇ ಕೋಮುವಾದಿಗಳಿಂದ ವಿದ್ಯಾರ್ಥಿ ಮತ್ತು ಉಪನ್ಯಾಸಕರ ಮೇಲೆ ನಡೆಯುತ್ತಿರುವ ಗೂಂಡಾಗಿರಿಗೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಗೊಳಿಸಬೇಕು ಮತ್ತು ಕೋಮುವಾದದ ಷಡ್ಯಂತರಕ್ಕೆ ಬಲಿಯಾದ ವಿದ್ಯಾರ್ಥಿ ಅಭಿಷೇಕ್‍ನಿಗೆ ಮತ್ತು ಹಲ್ಲೆಗೊಳಗಾದ ವಿದ್ಯಾರ್ಥಿ ಕೆ. ಪಿ ಅಂಜನ್‍ನಿಗೆ ನ್ಯಾಯ ದೊರಕಿಸಬೇಕು.

ಕಾಲೇಜಿನಲ್ಲಿ ಸ್ಟೂಡೆಂಟ್ ಯೂನಿಯನ್ ಇಲ್ಲದಿರುವುದೇ ಬಹುತೇಕ ಸಮಸ್ಯೆಗಳಿಗೆ ಕಾರಣವಾಗಿದ್ದು, ಸರಕಾರ ಎಲ್ಲಾ ಕಾಲೇಜುಗಳಲ್ಲಿ ಚುನಾಯಿತ ಸ್ಟೂಡೆಂಟ್ ಯೂನಿಯನ್ ಸ್ಥಾಪಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಾಗುತ್ತಿದ್ದು ಇದರ ಬಗ್ಗೆ ಜಾಗೃತಿ ಮೂಡಿಸಿ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸದೃಢಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಸರಕಾರವನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ, ದಕ್ಷಿಣ ಕನ್ನಡ ಜಿಲ್ಲಾ ಘಟಕವು ಆಗ್ರಹಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News