ಮೂಳೂರು: ವಿದ್ಯಾರ್ಥಿ ಸಮುದ್ರಪಾಲು

Update: 2017-01-11 18:26 GMT

ಕಾಪು, ಜ.11: ಇಲ್ಲಿನ ಠಾಣಾ ವ್ಯಾಪ್ತಿಯ ಮೂಳೂರು ಪಡು ಕಡಲಲ್ಲಿ ಸ್ನಾನಕ್ಕೆ ಇಳಿದಿದ್ದ ವಿದ್ಯಾರ್ಥಿಯೋರ್ವ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.

ಮೃತ ಬಾಲಕನನ್ನು ಮೂಳೂರು ಮಹಾಲಕ್ಷ್ಮೀ ನಗರ ಕಾಲನಿ ನಿವಾಸಿ ಪೈಂಟರ್ ಶೇಖರ ಪೂಜಾರಿ ಎಂಬವರ ಮಗ ರಾಕೇಶ್(11) ಎಂದು ಗುರುತಿಸಲಾಗಿದೆ.

ಮೂಳೂರು ಸರಕಾರಿ ಮೀನುಗಾರಿಕಾ ಶಾಲೆಯ ಎಂಟನೆ ತರಗತಿಯ ನಾಲ್ವರು ವಿದ್ಯಾರ್ಥಿಗಳು ಶಾಲೆ ಬಿಟ್ಟ ಬಳಿಕ ಪಕ್ಕದ ಸಮುದ್ರ ತೀರಕ್ಕೆ ತೆರಳಿದ್ದರು. ಸ್ನಾನಕ್ಕೆ ತೆರಳಿದ ಇವರಲ್ಲಿ ರಾಕೇಶ ಮುಳುಗುತ್ತಿದ್ದುದನ್ನು ಕಂಡ ಮಿಕ್ಕ ಮೂವರು ಬಾಲಕರು ಅಲ್ಲಿಂದ ಓಟಕ್ಕಿತ್ತಿದ್ದಾರೆ. ಸ್ಥಳೀಯರು ಸಮುದ್ರ ಕಿನಾರೆಗೆ ತೆರಳಿದಾಗ ರಾಕೇಶನ ಮೃತದೇಹ ತೇಲುತ್ತಿದ್ದುದನ್ನು ಕಂಡು ಸಮುದ್ರದಿಂದ ಮೇಲಕ್ಕೆತ್ತಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿ ಬದುಕಿಸಲು ಪ್ರಯತ್ನಿಸಿದರಾದರೂ, ಆಗಲೇ ಮೃತಪಟ್ಟಿದ್ದ ಎನ್ನಲಾಗಿದೆ.

ನಾಲ್ವರು ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲೆ ಬಿಟ್ಟ ಬಳಿಕ ಸಮುದ್ರ ತೀರಕ್ಕೆ ಸ್ನಾನ ಮಾಡಲು ತೆರಳುತ್ತಿದ್ದರು. ಕೆಲ ದಿನಗಳ ಹಿಂದೆ ಸ್ಥಳೀಯರು ಗದರಿಸಿದ್ದರಿಂದ ಅವರು ದೂರ ತೆರಳಿ ಸ್ನಾನ ಮಾಡುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳ ಸೈಕಲ್, ಶಾಲಾ ಬ್ಯಾಗು ಹಾಗೂ ರಾಕೇಶನ ಶಾಲಾ ಸಮವಸ ಸಮುದ್ರ ಕಿನಾರೆಯಲ್ಲಿಯೇ ದೊರಕಿದೆ.

ಈ ಸಂಬಂಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News