‘ಸಮಾನ ಕೆಲಸಕ್ಕೆ ಸಮಾನ ವೇತನ’ ತೀರ್ಪು ಜಾರಿಗೆ ಒತ್ತಾಯ : ಗುತ್ತಿಗೆ ನೌಕರರಿಂದ ಪ್ರತಿಭಟನಾ ಪ್ರದರ್ಶನ

Update: 2017-01-12 12:36 GMT

ಮಂಗಳೂರು, ಜ.12: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮುಂದಾಗಬೇಕು ಎಂದು ಆಗ್ರಹಿಸಿ ಸಿಐಟಿಯು ಸಂಯೋಜಿತ ಗುತ್ತಿಗೆ ನೌಕರರು ಗುರುವಾರ ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ ಪಂಜಾಬ್ ರಾಜ್ಯ ಸರಕಾರ ಹಾಗೂ ಇತರರ ವಿರುದ್ಧ ಜಗಜಿತ್‌ಸಿಂಗ್ ಮತ್ತಿತರರು ಹೂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಆದರೆ ಅದನ್ನು ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಿಂದೇಟು ಹಾಕುತ್ತಿವೆ ಎಂದು ಆಪಾದಿಸಿದರು.

ಸಿಐಟಿಯ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ಜಾಗತೀಕರಣ, ಉದಾರೀಕರಣ ನೀತಿಗಳು ದೇಶದಲ್ಲಿ ಜಾರಿಗೆ ಬಂದ ಬಳಿಕ ಹೊಸ ನೇಮಕಾತಿಗಳಿಗೆ ನಿರ್ಬಂಧ ಹೇರಿ ಅದೇ ಜಾಗಕ್ಕೆ ಗುತ್ತಿಗೆ ಕಾರ್ಮಿಕನ್ನು ನೇಮಿಸಲಾಯಿತು. ಕಳೆದ 25 ವರ್ಷಗಳಿಂದ ನಿರಂತರವಾಗಿ ದುಡಿಯುತ್ತಿದ್ದರೂ ಗುತ್ತಿಗೆ ನೌಕರರಿಗೆ ಭದ್ರತೆ ಇಲ್ಲದಂತಾಗಿದೆ. ಮನಪಾ, ಜಿಲ್ಲಾಧಿಕಾರಿ, ತಾಲೂಕು ಕಚೇರಿಗಳು, ಆಸ್ಪತ್ರೆಗಳು, ಬ್ಯಾಂಕುಗಳು, ಮೆಸ್ಕಾಂ, ಬಿಎಸ್‌ಎನ್‌ಎಲ್, ಮಾಲ್‌ಗಳು ಮುಂತಾದ ಕಡೆಗಳಲ್ಲಿ ದುಡಿಯುವ ಗುತ್ತಿಗೆ ಕಾರ್ಮಿಕರು ಸೆಕ್ಯುರಿಟಿ ಗಾರ್ಡ್‌ಗಳು ಸೇರಿದಂತೆ ಸಾವಿರಾರು ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂದರು.

ಸಿಐಟಿಯು ಜಿಲ್ಲಾ ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಸಂತೋಷ್ ಶಕ್ತಿನಗರ, ಗುತ್ತಿಗೆ ನೌಕರರ ಜಿಲ್ಲಾ ಮುಖಂಡರಾದ ಬಾಲಕೃಷ್ಣ, ಹರೀಶ್, ಸುನೀಲ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News