×
Ad

ಜ.15: ಮಾಜಿ ಸೈನಿಕರ ದಿನಾಚರಣೆ

Update: 2017-01-12 18:41 IST

ಮಂಗಳೂರು, ಜ.12: ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಮಾಜಿ ಸೈನಿಕರ ದಿನಾಚರಣೆಯು ಜ.15 ರಂದು ಬೆಳಗ್ಗೆ 10:30ಕ್ಕೆ ನಗರದ ಸಂತ ಅಲೋಶಿಯಸ್ ಕಾಲೇಜಿನ ಮಿನಿಹಾಲ್‌ನಲ್ಲಿ ಏರ್ಪಡಿಸಲಾಗಿದೆ ಎಂದು ದ.ಕ.ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಿಕ್ರಮ ದತ್ತ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 ಮಾಜಿ ಸೈನಿಕರ ನಿವೃತ್ತಿ ವೇತನ, ಬ್ಯಾಂಕ್‌ಗೆ ಸಂಬಂಧಿಸಿದ ವಿಚಾರಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ದೊರೆಯುವ ಸೌಲಭ್ಯಗಳ ಸಮಸ್ಯೆಗಳ ಕುರಿತು ವಿಚಾರ ಮಂಥನ ನಡೆಯಲಿದೆ. ದ.ಕ. ಜಿಲ್ಲೆಯ 3,500 ಮತ್ತು ಉಡುಪಿ ಜಿಲ್ಲೆಯ 2,500 ಮಂದಿ ನಿವೃತ್ತ ಸೈನಿಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ನುಡಿದರು.

 ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿರ್ದೇಶಕ ಬ್ರಿಗೇಡಿಯರ್ ಸಜ್ಜನ್ ಕಾರ್ಯಕ್ರಮ ಉದ್ಘಾಟಿಸುವರು. ದ.ಕ. ಜಿಲ್ಲಾ ಮಾಜಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕರು ಭಾಗವಹಿಸಿ ಮಾಜಿ ಸೈನಿಕರ ಕುಂದುಕೊರತೆಗಳ ಅಹವಾಲು ಆಲಿಸುವರು. ಕಾರ್ಯಕ್ರಮದಲ್ಲಿ 80 ವರ್ಷ ಮೇಲ್ಪಟ್ಟ ಮಾಜಿ ಸೈನಿಕರನ್ನು ಮತ್ತು ಸೈನಿಕರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ವಿಕ್ರಮ ದತ್ತ ಹೇಳಿದರು.

ನಿವೃತ್ತ ಕರ್ನಲ್ ಎನ್.ಎಸ್. ಭಂಡಾರಿ ಮಾತನಾಡಿ, ದೇಶದ ಸ್ವಾತಂತ್ರ್ಯಹೋರಾಟಗಾರಿರೆಗ ಪಿಂಚಣಿ ವ್ಯವಸ್ಥೆಯಿದೆ. ಆದರೆ ಎರಡನೆ ವಿಶ್ವಯುದ್ಧದಲ್ಲಿ ಬ್ರಿಟಿಷ್ ಸೇನೆಯ ಪರವಾಗಿ ಭಾಗವಹಿಸಿದ ಭಾರತೀಯ ಯೋಧರಿಗೆ ಸರಕಾರದಿಂದ ಯಾವುದೇ ಪಿಂಚಣಿ ದೊರೆಯುತ್ತಿಲ್ಲ. ಬ್ರಿಟಿಸ್ ಸೇನೆಯ ಪರವಾಗಿ ಹೋರಾಡಿದ ನಿವೃತ್ತ ಸೈನಿಕರಿಗೂ ಭತ್ತೆಗಳನ್ನು ನೀಡಬೇಕು. ರಾಜ್ಯ ಸರಕಾರದ ಗೆಜೆಟ್‌ನಲ್ಲಿ ಆಸ್ತಿ ತೆರಿಗೆಯಲ್ಲಿ ನಿವೃತ್ತ ಸೈನಿಕರಿಗೆ ಶೇ.50 ತೆರಿಗೆ ವಿನಾಯಿತಿ ಘೋಷಿಸಿದೆ. ಆದರೆ ಗೆಜೆಟ್‌ನಲ್ಲಿ ಗ್ರಾಪಂ ಮತ್ತು ಪ.ಪಂ.ನ ವ್ಯಾಪ್ತಿಯನ್ನು ಸ್ಪಷ್ಟವಾಗಿ ಉಲ್ಲೇಖಿಸದಿದ್ದರಿಂದ ಗ್ರಾಮಾಂತರ ಭಾಗದ ನಿವೃತ್ತ ಯೋಧರಿಗೆ ಈ ಸವಲತ್ತು ದೊರೆಯುತ್ತಿಲ್ಲ. ಈ ಸಮಸ್ಯೆಯನ್ನು ಸರಕಾರ ಬಗೆಹರಿಸಬೇಕು ಎಂದು ವಿಕ್ರಮ ದತ್ತ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಸ್.ಎಂ. ಐರನ್, ಖಜಾಂಚಿ ಕರ್ನಲ್ ಬಾಲಕೃಷ್ಣ್ಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News