×
Ad

ಯಕ್ಷಗಾನ-ಕಥಕ್ಕಳಿಗೆ ಸಾಮ್ಯತೆಯಿದೆ: ಡಿ.ಎಚ್.ಶಂಕರಮೂರ್ತಿ

Update: 2017-01-12 19:00 IST

ಮಂಗಳೂರು, ಜ.12: ಕನ್ನಡ ಭಾಷೆ ಮತ್ತು ಸಂಸ್ಕೃತಿ ಗಡಿನಾಡ ಪ್ರದೇಶಗಳಲ್ಲಿ ಹಂಚಿ ಹೋಗಿವೆ. ಕಾಸರಗೋಡಿನ ಬಹುತೇಕರ ಮನೆ ಮಾತು ಕನ್ನಡವಾಗಿದ್ದರೂ ಕೂಡ ಚಾರಿತ್ರಿಕ ಮತ್ತು ರಾಜಕೀಯ ಕಾರಣಗಳಿಂದಾಗಿ ಕರ್ನಾಟಕಕ್ಕೆ ಸೇರಿಸಲಾಗಲಿಲ್ಲ. ಕೇರಳದ ರಾಜ್ಯ ಕಲೆಯಾದ ‘ಕಥಕ್ಕಳಿ’ ಕೃತಿಯನ್ನು ಕನ್ನಡಕ್ಕೆ ಪರಿಚಯಿಸುತ್ತಿರುವುದು ಶ್ಲಾಘನಿಯ. ಈ ಕೃತಿ ಯಕ್ಷಗಾನ ಮತ್ತು ಕಥಕ್ಕಳಿಗಿರುವ ಸಾಮ್ಯತೆಯನ್ನು ಹೇಳುತ್ತವೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಭಿಪ್ರಾಯಪಟ್ಟರು.

ನಗರದ ನವಭಾರತ ವೃತ್ತದ ಬಳಿಯ ಓಶಿಯನ್ ಪರ್ಲ್ ಹೊಟೇಲ್ ಸಭಾಂಗನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೇರಳದ ತೆಯ್ಯಂ ಖ್ಯಾತಿಯ ಕೇಳು ಮಾಸ್ತರ್‌ರ ಕೈರಳಿ ಪ್ರಕಾಶನದ ‘ಕಥಕ್ಕಳಿ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

 ಅಳಿವಿನಂಚಿನಲ್ಲಿರುವ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೆಚ್ಚು ಚರ್ಚೆಗಳು ನಡೆಯಬೇಕಿದೆ. ಸಾಂಸ್ಕೃತಿಕ ಸಂಬಂಧಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಸರಕಾರ ಒಂದು ವಿಶೇಷ ಸಮಿತಿಯನ್ನು ರಚಿಸಿ ಗಡಿನಾಡು ಕನ್ನಡಿಗರ ಸಮಸ್ಯಗಳಿಗೆ ಸ್ಪಂದಿಸುತ್ತಿದೆ. ಗಡಿನಾಡ ಕನ್ನಡಿಗರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತ್ಯವ್ಯವಾಗಿದೆ ಎಂದು ಶಂಕರಮೂರ್ತಿ ಹೇಳಿದರು.

 ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಮಾತನಾಡಿ, ಪ್ರಕೃತಿ ತನ್ನ ಮೂಲ ಸತ್ವವನ್ನು ಉಳಿಸಿಕೊಳ್ಳುವ ಹಾಗೆ ನಾವು ನಮ್ಮ ಮೂಲ ಸಂಸ್ಕೃತಿಯ ಸತ್ವವನ್ನು ಉಳಿಸಿಕೊಳ್ಳಬೇಕು. ಆಧುನಿಕ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರೊಂದಿಗೆ ತುಳುನಾಡಿನ ಪರಂಪರೆಯ ಸೊಗಡನ್ನು ಜಗತ್ತಿಗೆ ಪರಿಚಯಿಸಬೇಕು. ಭಾವನಾತ್ಮಕವಾಗಿ ಬಂಧಿಸುವ ಯಕ್ಷಗಾನಕಲೆಯು ರಾಜ್ಯದ ಕಲೆಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

 ಜಿಲ್ಲಾ ರಾಜೋತ್ಸವ ಪ್ರಶಸ್ತಿ ವಿಜೇತ, ಕ್ರೀಡಾ ಅಂಕಣಗಾರ ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಇವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ಜಾನಪದ ಅಕಾಡಮಿ ಪುಸ್ತಕ ಪ್ರಶಸ್ತಿ ವಿಜೇತ, ಕಥಕ್ಕಳಿ ಕೃತಿಕಾರ ಕೇಳು ಮಾಸ್ತರ್ ಅಗಳ್ಪಾಡಿ, ಕೈರಳಿ ಪ್ರಕಾಶನದ ಎ.ಆರ್. ಸುಬ್ಬಯ್ಯ ಕಟ್ಟೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಸುರೇಶ ಬಲ್ಲಾಳ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಕೇಶವ ಪ್ರಸಾದ್ ನಾಣಿತ್ತಿಲು, ಕೇರಳ ಮಾಪಿಳ ಕಲಾಮಂಡಲಂ ಅಧ್ಯಕ್ಷ ಎಂ.ಸಿ. ಕಮರುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.

ಗಡಿನಾಡು ಸಾಂಸ್ಕೃತಿಕ ಸಾಹಿತ್ತಯ ಅಕಾಡಮಿ ಕಾರ್ಯದರ್ಶಿ ಅಖಿಲೇಶ್ ನಗುಮುಗಮ್ ವಂದಿಸಿದರು. ಕರ್ನಾಟಕ ಜಾನಪದ ಪರಿಷತ್‌ನ ಕೇರಳ ಗಡಿನಾಡ ಘಟಕದ ಖಜಾಂಚಿ ರವಿ ನಾಯ್ಕಪು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News