ಶಿರ್ತಾಡಿ : ಜವಾಹರಲಾಲ್ ನೆಹರು ಪ್ರೌಢಶಾಲೆಯಲ್ಲಿ ಪ್ರತಿಭಾ ದಿನಾಚರಣೆ

Update: 2017-01-12 14:30 GMT

ಮೂಡುಬಿದಿರೆ,ಜ.12 : ಶಿರ್ತಾಡಿ ಜವಾಹರಲಾಲ್ ನೆಹರು ಪ್ರೌಢಶಾಲೆ ಇದರ ಪ್ರತಿಭಾ ದಿನಾಚರಣೆ ಮತ್ತು ಬಹುಮಾನ ವಿತರಣಾ ಸಮಾರಂಭವು ಗುರುವಾರ ನಡೆಯಿತು.

  ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿರುವ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ ನಾವಿಂದು ಸ್ಪರ್ಧಾತ್ಮಕ ಯುಗದಲ್ಲಿದ್ದೇವೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಪ್ರತಿಭೆಯಿದ್ದು ಉನ್ನತ ಸ್ಥಾನಮಾನವನ್ನು ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳಿಗೆ ಕೀಳರಿಮೆ ಬೇಡ ಎಂದು ಹೇಳಿದ ಅವರು ತಾಂತ್ರಿಕತೆ ಮುಂದುವರೆಯುತ್ತಿದ್ದಂತೆ ಮಾನವೀಯತೆ ಮೌಲ್ಯಗಳು ಹೆಚ್ಚಾಗಲಿ ಎಂದರು.

 ಶಾಲೆಯ ಹಳೆ ವಿದ್ಯಾರ್ಥಿ ಝಕಿರಾ ಬಾನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಐ.ಎ.ಎಸ್, ಐಪಿಎಸ್ ಅಧಿಕಾರಿಗಳು ಆಗದೆ ಹೋದರೂ ಪರವಾಗಿಲ್ಲ. ಜೀವನದಲ್ಲಿ ನೀಟಾಗಿ ಬದುಕಬಲ್ಲೆ ಎಂಬ ಆತ್ಮವಿಶ್ವಾಸವನ್ನು ಹೊಂದಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

  ಇನ್ನೋರ್ವ ಹಳೆ ವಿದ್ಯಾರ್ಥಿ ಯಶೋಧರ್ ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ತಿಮ್ಮಯ್ಯ ಶೆಟ್ಟಿ, ಕಾರ್ಯದರ್ಶಿ ಯಂ. ಸಂಜಯಂತ ಕುಮಾರ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ.ರಾಜು ಪೂಜಾರಿ, ಎಸ್.ಡಿ. ಸುಶಾಂತ್ ಸಾಮ್ರಾಜ್ಯ, ಶಾಲಾ ವಿದ್ಯಾರ್ಥಿ ನಾಯಕ ಕೀರ್ತಿರಾಜ್ ಜೈನ್ ಉಪಸ್ಥಿತರಿದ್ದರು.

  ಶಾಲಾ ಮುಖ್ಯ ಶಿಕ್ಷಕ ಟಿ.ಕೆ.ವೆಂಕಟರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಸರಕಾರದಿಂದ ಶಾಲೆಗೆ ಆರ್ಥಿಕ ಸಹಕಾರವಿಲ್ಲದಿರುವುದರಿಂದ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಹಳೆ ವಿದ್ಯಾರ್ಥಿಗಳು ಸಹಕರಿಸಬೇಕೆಂದು ಹೇಳಿದರು. ಶಿಕ್ಷಕಿಯರಾದ ಸಾವಿತ್ರಿ, ಪದ್ಮಾಕ್ಷಿ, ದೈಹಿಕ ಶಿಕ್ಷಣ ಶಿಕ್ಷಕ ಗೋವರ್ಧನ್ ಬಹುಮಾನಿತರ ಪಟ್ಟಿ ನೀಡಿದರು. ಶಿಕ್ಷಕಿ ಮಾಲತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News