ನಾಲ್ವರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಹತ್ಯೆಗೈದ ಸಿಐಎಸ್‌ಎಫ್ ಯೋಧ
ಪಟ್ನಾ,ಜ.13: ಬಿಹಾರದ ಔರಂಗಾಬಾದ್ ಜಿಲ್ಲೆಯ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಐಎಸ್‌ಎಫ್ ಯೋಧನೋರ್ವ ಗುರುವಾರ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಾಟ ನಡೆಸಿ,ನಾಲ್ವರನ್ನು ಬಲಿ ಪಡೆದಿದ್ದಾನೆ.
ಮಧ್ಯಾಹ್ನ 12:30ರ ಸುಮಾರಿಗೆ ಎನ್‌ಟಿಪಿಸಿ ಮತ್ತು ಬಿಹಾರ ರಾಜ್ಯ ವಿದ್ಯುತ್ ಮಂಡಳಿಯ ಜಂಟಿ ಉದ್ಯಮವಾಗಿರುವ ನಬಿನಗರ ಪವರ್ ಜನರೇಷನ್ ಕಂಪನಿಯಲ್ಲಿ ಈ ಘಟನೆ ನಡೆದಿದೆ. ಸ್ಥಾವರದ ಭದ್ರತೆಗಾಗಿ ಸಿಐಎಸ್‌ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.
ಆರೋಪಿ ಸಿಐಎಸ್‌ಎಫ್ ಕಾನ್‌ಸ್ಟೇಬಲ್ ಬಲವೀರ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮೃತರಲ್ಲಿ ಮೂವರು ಸಿಐಎಸ್‌ಎಫ್ ಹೆಡ್ ಕಾನ್‌ಸ್ಟೇಬಲ್‌ಗಳು ಮತ್ತು ಓರ್ವ ಎಎಸ್‌ಐ ಸೇರಿದ್ದಾರೆ.
ರಜೆಯ ಕುರಿತು ವಿವಾದದಲ್ಲಿ ತಾಳ್ಮೆ ಕಳೆದುಕೊಂಡ ಸಿಂಗ್ ತನ ಸರ್ವಿಸ್ ರೈಫಲ್‌ನಿಂದ ಸಹೋದ್ಯೋಗಿಗಳ ಮೇಲೆ ಗುಂಡುಗಳನ್ನು ಹಾರಿಸಿದ್ದಾನೆ. ಮೂವರು ಸ್ಥಳದಲ್ಲಿ ಸಾವನ್ನಪ್ಪಿದ್ದರೆ, ಇನ್ನೋರ್ವರು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಎಸ್‌ಪಿ ಡಾ.ಸತ್ಯಪ್ರಕಾಶ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಕರ್ತವ್ಯದ ಪಾಳಿಯ ಬದಲಾವಣೆಗಾಗಿ ಸಿಐಎಸ್‌ಎಫ್ ಸಿಬ್ಬಂದಿಗಳು ಕಂಪನಿಯ ಆವರಣದಲ್ಲಿರುವ ತಮ್ಮ ಕಚೇರಿಯಲ್ಲಿ ಸೇರಿದ್ದಾಗ ಸಿಂಗ್ ತನ್ನ ಇನ್ಸಾಸ್ ರೈಫಲ್‌ನಿಂದ ಗುಂಡುಗಳನ್ನು ಹಾರಿಸಿದ್ದ. ತಕ್ಷಣವೇ ಇತರ ಸಿಬ್ಬಂದಿಗಳು ಆತನ ಮೇಲೆ ಮುಗಿಬಿದ್ದು ರೈಫಲ್‌ನ್ನು ಕಸಿದುಕೊಂಡು ಇನ್ನಷ್ಟು ಗುಂಡು ಹಾರಾಟವನ್ನು ತಪ್ಪಿಸಿದರು ಎಂದು ಎಸ್‌ಪಿ ತಿಳಿಸಿದರು.
ಸಿಂಗ್ ಎರಡು ತಿಂಗಳ ಯೋಗ ತರಬೇತಿಯಿಂದ ವಾಪಸಾಗಿದ್ದು, ರಜೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಕೆಲ ವಿವಾದಗಳನ್ನು ಹೊಂದಿದ್ದ ಎನ್ನಲಾಗಿದೆ.
ಈ ಘಟನೆಯ ಕುರಿತು ವಿಚಾರಣೆಗೆ ಆದೇಶಿಸಲಾಗಿದೆ ಎಂದು ಸಿಐಎಸ್‌ಎಫ್ ತಿಳಿಸಿದೆ.