×
Ad

ಕುಮಾರಧಾರಾಗೆ ಬಾಗಿನ ಅರ್ಪಣೆ, ಸರ್ವಧರ್ಮ ಪ್ರಾರ್ಥನೆ

Update: 2017-01-12 23:27 IST

ಪುತ್ತೂರು,ಜ.12: ಪುತ್ತೂರು ನಗರ ಸಭೆಯ ವತಿಯಿಂದ ಕುಮಾರಧಾರಾ ನದಿಗೆ ಬಾಗಿನ ಅರ್ಪಣೆ ಹಾಗೂ ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮ ನಗರಕ್ಕೆ ನೀರು ಸರಬರಾಜು ಆಗುತ್ತಿರುವ ನೆಕ್ಕಿಲಾಡಿ ರೇಚಕ ಸ್ಥಾವರದ ಅಣೆಕಟ್ಟಿನ ಬಳಿ ಗುರುವಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ದಾರ್ಮಿಕ ಪರಿಷತ್ ಸದಸ್ಯ ಎನ್.ಕೆ. ಜಗನ್ನಿವಾಸ್ ರಾವ್ ಅವರು ಮನುಷ್ಯನ ಮೂಲಭೂತ ಅಗತ್ಯವಾಗಿರುವ ಸೂರು, ಬಟ್ಟೆ ಮತ್ತು ಆಹಾರಗಳಲ್ಲಿ ನೀರು ಬಹುಮುಖ್ಯವಾಗಿದ್ದು, ಇದೀಗ ನದಿ, ನೀರಿನ ವಿಚಾರದಲ್ಲಿ ಹಲವು ಸಂಘರ್ಷಗಳಾಗುತ್ತಿದೆ. ನಾವು ಮಾನವೀಯ ಮೌಲ್ಯಗಳನ್ನು ಕಳೆದುಕೊಂಡಿರುವುದೇ ಈ ಸಂಘರ್ಷಕ್ಕೆ ಕಾರಣವಾಗಿದೆ. ಪರಿಸರ ನಾಶ, ನಿರಿನ ದುರ್ಬಳಕೆ, ಇಂಗಿಸುವಿಕೆ ಇಲ್ಲದ ಕಾರಣ ನೀರಿನ ಭವಣೆ ಅನುಭವಸುವಂತಾಗಿದೆ. ಈ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಜಾಗೃತಿ ಪ್ರಜ್ಞೆ ಬೆಳೆಸಬೇಕಾಗಿದೆ ಎಂದರು.

ಪುತ್ತೂರು ಬದ್ರಿಯಾ ಜುಮ್ಮಾ ಮಸೀದಿಯ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿ ಮಾತನಾಡಿ ನೀರಿಗಾರಿ ಪ್ರಾರ್ಥನೆ ಮಾತ್ರವಲ್ಲ ಪ್ರಯತ್ನವೂ ಮುಖ್ಯವಾಗಿದೆ. ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಪೆಟ್ರೋಲ್‌ಗಾಗಿ ಯುದ್ಧ ನಡೆಯುವಂತೆ ಮುಂದೆ ನೀರಿಗಾಗಿ ನಮ್ಮಲ್ಲಿ ಯುದ್ಧ ನಡೆಯುವ ಅಪಾಯವಿದೆ. ಭೂಗರ್ಭಗಳಲ್ಲಿರುವ ನೀರು ಇಂದು ನಿನ್ನೆಯದಲ್ಲ. ಆದರೆ ಬೋರ್‌ವೆಲ್ ಮೂಲಕ ಭೂಗರ್ಭದಲ್ಲಿನ ನೀರಿಗೆ ಕನ್ನ ಹಾಕುವ ಕೆಟ್ಟ ಪದ್ದತಿ ನಮ್ಮಲ್ಲಿ ಬೆಳೆದುಬಿಟ್ಟಿದೆ. ಬೋರ್‌ವೆಲ್ ನಿಷೇಧವಾಗದಿದ್ದಲ್ಲಿ ಮುಂದಿನ ಪೀಳಿಗೆ ನೀರಿಲ್ಲದೆ ಪರದಾಡುವ ಸ್ಥಿತಿ ಉಂಟಾಗಲಿದೆ. ನೀರಿನ ಅಮೂಲ್ಯತೆಯನ್ನು ಅರಿತು ಅದನ್ನು ಪೋಲಾಗದಂತೆ ಕಾಪಾಡಿಕೊಂಡು ಬರುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.

ಬೆದ್ರಾಳ ಚರ್ಚ್‌ನ ಧರ್ಮಗುರು ಫಾ. ಅಸ್ಸಿಸ್ಸಿ ಅಲ್ಮೇಡಾ ಮಾತನಾಡಿ ಜಾತಿ, ಧರ್ಮಗಳನ್ನು ನೋಡದೆ ದೇವರು ನೀಡುತ್ತಿರುವ ನೈಸರ್ಗಿಕ ಫಲ ನೀರು. ಅದನ್ನು ಪರಸ್ಪರ ಹಂಚಿಕೊಂಡು ಬದುಕುವುದು ಸಾಮಾಜಿಕ ಜವಾಬ್ದಾರಿಯಾಗಿದೆ. ಸ್ಚಚ್ಚತಾ ಆಂದೋಲನದ ಮಾದರಿಯಲ್ಲಿ ನೀರಿಂಗಿಸುವ ಕಾರ್ಯವೂ ನಡೆಯಬೇಕು. ನೀರು ಉಳಿಸುವ ನಿಟ್ಟಿನಲ್ಲಿ ನಗರಸಭೆಯ ವತಿಯಿಂದ ಜಾಗೃತಿ ಆಂದೋಲನಡೆಯಬೇಕು ಎಂದರು.

ನಗರಸಭಾ ಪೌರಾಯುಕ್ತೆ ರೂಪಾ ಟಿ.ಶೆಟ್ಟಿ ಮಾತನಾಡಿ ನಗರಸಭೆಯಿಂದ ಕುಡಿಯುವ ನೀರಿಗೆ ಸರಾಸರಿ ರೂ. 40 ಲಕ್ಷ ವೆಚ್ಚವಾಗುತ್ತಿದೆ. ಆದರೆ ರೂ. 20 ಲಕ್ಷ ಮಾತ್ರ ಸಂಗ್ರಹವಾಗುತ್ತಿದೆ. ಆದಾಗ್ಯೂ ನೀರಿನ ಶುಲ್ಕ ಕಡಿಮೆ ಮಾಡಿ ಎಂದು ಆಗ್ರಹಿಸುತ್ತಾರೆ. ಮನೆಯಲ್ಲಿ ಬಾವಿ ಇದ್ದವರೂ ಅದನ್ನು ಬಳಸಿಕೊಳ್ಳದೆ ಗಿಡಗಳಿಗೂ ನಗರಸಭೆಯ ನೀರನ್ನೇ ಉಪಯೋಗಿಸುತ್ತಾರೆ. ಈ ರೀತಿಯಾಗಿ ನೀರುಪೋಲಾಗುವುದನ್ನು ತಡೆಯಲು ಎಲ್ಲರ ಸಹಕಾರ ಅಗತ್ಯ ಎಂದರು.

ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ನದಿಗೆ ಬಾಗಿನ ಅರ್ಪಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅರ್ಚಕ ರಾಘವೇಂದ್ರ ಭಟ್ ನೆಕ್ಕಿಲಾಡಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ನಗರಸಭಾ ಸದಸ್ಯರಾದ ಶಕ್ತಿಸಿನ್ಹ, ಜೆಸಿಂತಾ ಮಸ್ಕರೇನಸ್, ಅನ್ವರ್ ಖಾಸಿಂ, ವನಿತಾ ಕೆ. ಮುಖೇಶ್ ಕೆಮ್ಮಿಂಜೆ, ನಾಮನಿರ್ದೇಶಿತ ಸದಸ್ಯರಾದ ರೂಪರೇಖ ಆಳ್ವ, ಮಹೇಶ್ ಕಲ್ಲೇಗ, ಇಂಜಿನಿಯರ್ ತುಳಸಿದಾಸ್, ನೀರು ವಿಭಾಗದ ವಸಂತ ಉಪಸ್ಥಿತರಿದ್ದರು.

ನಗರಸಭಾ ಸದಸ್ಯ ಎಚ್. ಮಹಮ್ಮದ್ ಆಲಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಹರಿ ರೋಜ್‌ಗಾರ್ ಯೋಜನೆಯ ಸಮುದಾಯ ಸಂಘಟಕ ಉಸ್ಮಾನ್ ಬೊಳುವಾರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News