ಯುವ ಸಮೂಹ ಡಿಜಿಟಲ್ ಪಾವತಿಯತ್ತ ಗಮನ ಹರಿಸಬೇಕಿದೆ- ನಿರ್ಮಲಾ ಸೀತಾರಾಮನ್
ಪುತ್ತೂರು,ಜ.12: ದೇಶದಲ್ಲಿ ಸಾಕ್ಷರತೆ, ತಂತ್ರಜ್ಞಾನಗಳು ಸಾಕಷ್ಟು ಮುಂದುವರಿದಿದ್ದರೂ ಶೇ.90 ಮಂದಿ ನಗದು ರೂಪದಲ್ಲಿಯೇ ವ್ಯವಹಾರ ನಡೆಸುತ್ತಿದ್ದಾರೆ. ಯುವ ಸಮೂಹ ಡಿಜಿಟಲ್ ಪಾವತಿಯತ್ತ ಗಮನ ಹರಿಸಬೇಕಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಹಣಕಾಸು ಖಾತೆಯ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಅವರು ಗುರುವಾರ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ರೇಡಿಯೋ ಪಾಂಚಜನ್ಯ ಬಾನುಲಿ ಕೇಂದ್ರ ಹಾಗೂ ವಿವೇಕಾನಂದ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ದೇಶವನ್ನು ತೆರಿಗೆ ಕಳ್ಳರಿಂದ ತಪ್ಪಿಸಲು ಸರ್ಕಾರ ಆದೇಶ ತೆರಿಗೆ ಪಾವತಿಗೆ ಸಾಕಷ್ಟು ಅವಕಾಶಗಳನ್ನು ನೀಡಿತ್ತು. ಆದರೆ ದೇಶದ 24 ಲಕ್ಷ ಮಂದಿ ಮಾತ್ರ ತೆರಿಗೆ ಪಾವತಿಸಿ ಪ್ರಾಮಾಣಿಕತೆಯನ್ನು ಮೆರೆದರು. ಉಳಿದವರು ತಪ್ಪಿಸಿಕೊಳ್ಳದಂತೆ ಸರ್ಕಾರ ತೆರಿಗೆ ಕಳ್ಳರ ವಿರುದ್ದ ಸಮರ ಸಾರಿದೆ. ಇದರಿಂದಾಗಿ ಶೇ.80ಕ್ಕೂ ಅಧಿಕ ಕಪ್ಪು ಹಣ ಹೊರಗೆ ಬಂದಿದೆ ಎಂದು ಹೇಳಿದರು. ಮಾತೃ ಭಾಷೆಯಲ್ಲಿನ ಸೊಗಡನ್ನು ಜಗತ್ತಿನ ಇತರ ಯಾವ ಭಾಷೆಯಿಂದಲೂ ನೀಡಲು ಅಸಾಧ್ಯ. ರೇಡಿಯೋ ಪಾಂಚಜನ್ಯ ಸ್ಥಳೀಯ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದರು. ದಿಕ್ಸೂಚಿ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿತ ಪ್ರಾಂತ ಸಹಪ್ರಚಾರ ಪ್ರಮುಖ್ ಪ್ರದೀಪ್ ಮಾತನಾಡಿ ಚರ್ಚೆ, ಯೋಚನೆ, ಉಪದೇಶ ಮಾಡುವವರು ಸಾಕಷ್ಟು ಮಂದಿಯಿದ್ದರೂ ಯಾರೂ ಕಾರ್ಯಗತಗೊಳಿಸುವವರಿಲ್ಲ. ಸ್ವಾಮೀ ವಿವೇಕಾನಂದರು ಯೋಚನೆ ಮಾಡಿದ್ದನ್ನು ತಳಮಟ್ಟದಲ್ಲಿ ಅನುಷ್ಠಾನಗೊಳಿಸದ್ದರು. ಇದರಿಂದಾಗಿ ಸ್ವಾಮಿ ವಿವೇಕಾನಂದರು ನಮಗೆ ಇಂದಿಗೂ ಮಾದರಿಯಾಗಿದ್ದಾರೆ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರದಾನಿ ನರೇಂದ್ರ ಮೋದಿ ಅವರು ನೋಟು ಅಮಾನ್ಯೀಕರಣದ ಬಗ್ಗೆ ಮಾತನಾಡಿದ ವಿಚಾರಗಳ ಕಿರು ಹೊತ್ತಗೆಯನ್ನು ಬಿಡುಗಡೆಗೊಳಿಸಲಾಯಿತು ಮತ್ತು ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ವಿವೇಕಾನಂದ ಕಾಲೇಜ್‌ನ ಸ್ಥಾಪಕ ಸಮಚಾಲಕ ಕೆ. ರಾಮಭಟ್ ಉರಿಮಜಲು, ರೇಡಿಯೋ ಪಾಂಚಜನ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಕೊಳತ್ತಾಯ, ಸದಸ್ಯ ಬಿ.ಟಿ. ರಂಜನ್ ಮತ್ತಿತರರು ಉಪಸ್ಥಿತರಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರೇಡಿಯೋ ಪಾಂಚಜನ್ಯ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಕುಂಟಿನಿ ವಂದಿಸಿದರು. ಉಪನ್ಯಾಸಕಿ ವಿಜಯ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು.