×
Ad

ವಿದ್ಯಾರ್ಥಿ ದಿವಿತ್‌ಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್

Update: 2017-01-12 23:52 IST

ಪುತ್ತೂರು, ಜ.12: ಎಲ್ಲಾ ವ್ಯವಸ್ಥೆಯಲ್ಲೂ ವರ್ಗಾವಣೆ ಎಂಬುದು ಇರುತ್ತದೆ. ಇಲಾಖೆಯಲ್ಲಿನ ಈ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಆಗುವುದಿಲ್ಲ. ಆದರೂ ಇಲ್ಲಿನ ವಿದ್ಯಾರ್ಥಿ ದಿವಿತ್ ರೈ ಬೇಡಿಕೆಯಂತೆ ಶಿಕ್ಷಕರ ವರ್ಗಾವಣೆಯನ್ನು ರದ್ದುಗೊಳಿಸುವಂತೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಗೃಹ ಸಚಿವನಾಗಿ ಶಿಕ್ಷಣ ಸಚಿವರಿಗೆ ಆದೇಶ ನೀಡಿ ದಿವಿತ್ ರೈಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ದಿವಿತ್ ರೈಗೆ ಪದವಿಯವರೆಗೆ ಶಿಕ್ಷಣ ನೀಡುವ ಜವಾಬ್ದಾರಿ ನನ್ನದು ಅಲ್ಲದೇ, ಹಾರಾಡಿ ಶಾಲೆಯ ಅಭಿವೃದ್ಧಿಗಾಗಿ ತನ್ನ ವಿಧಾನ ಪರಿಷತ್ ಸದಸ್ಯ ಅನುದಾನದಲ್ಲಿ 10 ಲಕ್ಷ ರೂ. ನೀಡುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಅವರು ಪುತ್ತೂರಿನ ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸಂಜೆ ನಡೆದ ಹೇಮಂತ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಾನೂ ಒಬ್ಬ ಸರಕಾರಿ ಶಾಲೆಯಲ್ಲಿ ಕಲಿತವನಾಗಿದ್ದು, ಸರಕಾರಿ ಶಾಲೆಗಳಿಗೆ ಹೋಗುವವರು ಬಡವರ, ಕಾರ್ಮಿಕರ, ರೈತರ ಮಕ್ಕಳು, ಖಾಸಗಿ ಶಾಲೆಗಳಿಗೆ ಫೀಸು ನೀಡಿ ಕಲಿಯಲು ಶಕ್ತಿ ಇಲ್ಲದವರು ಎಂಬುವುದು ಗೊತ್ತಿದೆ ಎಂದ ಅವರು, ಸರಕಾರಿ ಶಾಲೆಗಳು ಚೆನ್ನಾಗಿ ನಡೆಯಬೇಕಾದರೆ ಎಲ್ಲರ ಸಹಕಾರ ಬೇಕು. ಶಿಕ್ಷಕರು ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಮಕ್ಕಳ ಪ್ರತಿಭೆಯನ್ನು ಹೊರತರಬೇಕಾಗುತ್ತದೆ ಎಂದರು. ಸರಕಾರಿ ಶಾಲೆಗಳ ಬಗ್ಗೆ ತಿರಸ್ಕಾರದ ಮಾತುಗಳು ಕೇಳಿ ಬರುತ್ತಿದೆ. ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಮಾತನಾಡುವವರಿದ್ದಾರೆ. ಆದರೆ ಸರಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣವನ್ನು ಕಾಪಾಡಿಕೊಂಡು ಬಂದಿವೆ. ಮಕ್ಕಳ ಮನೋಸ್ಥಿತಿ ಬೆಳೆಸುವ ಕೆಲಸ ಆಗುತ್ತಿದೆ ಎನ್ನುವುದಕ್ಕೆ ಹಾರಾಡಿ ಶಾಲೆಯೇ ಒಂದು ಉದಾಹರಣೆ ಎಂದು ಅವರು ಹೇಳಿದರು. ಕೇಂದ್ರ ಸರಕಾರ ಕಡ್ಡಾಯ ಶಿಕ್ಷಣ ಜಾರಿಗೊಳಿಸಿದ್ದು, ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ನಾವು ಒಂದು ಹೊತ್ತಿನ ಊಟ ಬಿಟ್ಟು ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ದೇಶದ ಭವಿಷ್ಯ ಉಜ್ವಲವಾಗಬೇಕಾದರೆ, ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ಶಿಕ್ಷಣವೊಂದರಿಂದ ಮಾತ್ರ ಸಾಧ್ಯ ಎಂದ ಅವರು, ವೈದ್ಯಕೀಯ ಮತ್ತು ತಂತ್ರಜ್ಞಾನದ ಮೂಲಕ ದೇಶದ ಶಕ್ತಿ ಏನೆಂಬುದನ್ನು ನಮ್ಮ ಯುವಜನತೆ ವಿಶ್ವಕ್ಕೆ ತೋರಿಸಿಕೊಡುತ್ತಿದ್ದಾರೆ. ಇದು ಶಿಕ್ಷಣದಿಂದ ಆದ ದೊಡ್ಡ ಬದಲಾವಣೆ ಎಂದು ಅವರು ತಿಳಿಸಿದರು. ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಜೆ.ಆರ್.ಲೋಬೋ ಬೊಳುವಾರು ಮಾಧವ ನಾಯಕ್ ಸ್ಮಾರಕ ಗ್ರಂಥಾಲಯವನ್ನು, ಜಿಪಂ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್.ಕೆ ಚಿತ್ರ ಪ್ರದರ್ಶನ ಮತ್ತು ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದರು. ಶಾಲಾ ವರದಿಯನ್ನು ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಬಿಡುಗಡೆಗೊಳಿಸಿದರು. ಜಿಪಂ ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ, ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪಿ.ಪಿ.ವರ್ಗೀಸ್, ನಗರಸಭೆೆಯ ಅಧ್ಯಕ್ಷೆ ಜಯಂತಿ ಬಲ್ನಾಡು, ಉಪಾಧ್ಯಕ್ಷ ವಿಶ್ವನಾಥ ಗೌಡ, ಐಜಿಪಿ ಹರಿಶೇಖರನ್, ಎಸ್ಪಿ ಭೂಷಣ್ ಗುಲಾಬ್‌ರಾವ್ ಬೋರಸೆ, ಉಪವಿಭಾಗಾಧಿಕಾರಿ ರಘುನಂದನ್ ಮೂರ್ತಿ, ಗೃಹ ಸಚಿವರ ಆಪ್ತ ಸಲಹೆಗಾರ ದಿನೇಶ್, ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್., ನಗರಸಭೆೆಯ ಸದಸ್ಯೆ ಜಯಲಕ್ಷ್ಮೀ ಸುರೇಶ್ ಮತ್ತಿತರರು ಇದ್ದರು. ಶಾಲಾ ಮುಖ್ಯಗುರು ಮುದರ ಬೈರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಮಹೇಶ್ ನಾಯ್ಕ ಸ್ವಾಗತಿಸಿದರು. ಉಪಾಧ್ಯಕ್ಷೆ ಪ್ರತಿಮಾ ಯು.ರೈ ವಂದಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News