ವಿವೇಕಾನಂದರ ಪರಿಕಲ್ಪನೆಯಂತೆ ಯುವಜನತೆ ಮುನ್ನಡೆಯಲಿ: ರೈ
ಮಂಗಳೂರು, ಜ.12: ಭವಿಷ್ಯದಲ್ಲಿ ಭಾರತವು ಸುಜ್ಞಾನ, ಸಾಮರಸ್ಯದಿಂದ ಕೂಡಿರಬೇಕಾದರೆ ಸ್ವಾಮಿ ವಿವೇಕಾನಂದರ ಪರಿಕಲ್ಪನೆಯಂತೆ ಯುವಜನತೆ ಮುನ್ನಡೆಯಬೇಕು. ಆಗಲೇ ಭಾರತ ವಿಶ್ವದಲ್ಲೇ ರಾರಾಜಿಸಬಲ್ಲುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ದ.ಕ. ಜಿಲ್ಲಾಡಳಿತ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದ.ಕ., ಮಂಗಳೂರು ವಿವಿ ಯುವ ರೆಡ್‌ಕ್ರಾಸ್ ಘಟಕ ಮತ್ತು ದ.ಕ. ಕಾಲೇಜು ಶಿಕ್ಷಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಪುರಭವನದಲ್ಲಿ ಗುರುವಾರ ನಡೆದ ಸ್ವಾಮಿ ವಿವೇಕಾನಂದರ 154ನೆ ಜನ್ಮ ದಿನಾಚರಣೆ, ರಾಷ್ಟ್ರೀಯ ಯುವ ಸಪ್ತಾಹ ಸಮಾರಂಭ ಮತ್ತು ಯುವ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭ ವಾರ್ತಾ ಇಲಾಖೆ ಹೊರತಂದ ಕಿರುಹೊತ್ತಗೆಯನ್ನು ಬಿಡುಗಡೆಗೊಳಿಸಲಾಯಿತು. ಅಪರ ಜಿಲ್ಲಾಕಾರಿ ಎಸ್.ಕುಮಾರ್, ಜಿಪಂ ಸಿಇಒ ಡಾ.ಎಂ.ಆರ್.ರವಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯಾಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ, ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ರಾಜೇಶ್, ಮಂಗಳೂರು ವಿವಿ ಯುವ ರೆಡ್‌ಕ್ರಾಸ್ ಸಂಸ್ಥೆಯ ನೋಡೆಲ್ ಅಕಾರಿ ವಿನೀತಾ ರೈ, ದ.ಕ. ಯುವ ರೆಡ್‌ಕ್ರಾಸ್‌ನ ಅಧ್ಯಕ್ಷ ಸಚೇತ್ ಸುವರ್ಣ, ರಥಬೀದಿ ಸರಕಾರಿ ಕಾಲೇಜಿನ ಪ್ರಾಂಶುಪಾಲ ರಾಜಶೇಖರ ಹೆಬ್ಬಾರ್ ಸಿ., ರೆಡ್‌ಕ್ರಾಸ್ ಸಂಸ್ಥೆಯ ವೇಣು ಶರ್ಮ, ನಿತ್ಯಾನಂದ ಶೆಟ್ಟಿ, ದಯಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ. ಜಿಲ್ಲಾಧ್ಯಕ್ಷ ಶಾಂತಾರಾಮ್ ಶೆಟ್ಟಿ ಸ್ವಾಗತಿಸಿದರು.