ಪೆಟ್ಟು ತಿಂದ ವೃದ್ಧೆ ಆಸ್ಪತ್ರೆಯಲ್ಲಿ: ಸೊಸೆ ವಿರುದ್ಧ ಪ್ರಕರಣ ದಾಖಲು !
ಹರಿಪ್ಪಾಡ್,ಜ.13: ಕೇರಳದಲ್ಲಿ ವೃದ್ಧ ಮಹಿಳೆಯೊಬ್ಬರನ್ನು ಥಳಿಸಿದ ಘಟನೆ ಬೆಳಕಿಗೆ ಬಂದಿದೆ. ತಪ್ಪಿತಸ್ಥೆ ಸೊಸೆಯ ವಿರುದ್ಧ ಪ್ರಕರಣ ದಾಖಲಾಗಿದೆ.ಕೇರಳ ಹರಿಪ್ಪಾಡ್ ಸಮೀಪದ ಮಣ್ಣರಶಾಲ ವಿಪಿನ್ ಭವನದ ಗೌರಿಕುಟ್ಟಿ(76)ಗೆ ಅವರ ಸೊಸೆ ಬಬಿತಾ(35) ಹೊಡೆದಿದ್ದು, ಈ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಪೊಲೀಸರ ಗಮನಕ್ಕೆ ಬಂದಿದೆ ಎಂದು ವೆಬ್ ಪೋರ್ಟಲೊಂದು ವರದಿ ಮಾಡಿದೆ. ವೃದ್ಧೆ ಗೌರಿಕುಟ್ಟಿಯವರನ್ನು ಹರಿಪ್ಪಾಡ್ ತಾಲೂಕು ಆಸ್ಪತ್ರೆಗೂ ನಂತರ ಆಲಪ್ಪುಝ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ.
ಗೌರಿಕುಟ್ಟಿಗೆ ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ತನ್ನ ಅಮ್ಮ ಎದುರಿಸುತ್ತಿರುವ ಹಿಂಸೆಯ ಕುರಿತು ಗೌರಿಕುಟ್ಟಿ ಪುತ್ರಿ ನಿರ್ಮಲಾ ನಗರ ಸಭೆ ಜಾಗ್ರತಾ ಸಮಿತಿಗೆ ದೂರು ನೀಡಿದ್ದರು. ಗೌರಿಕುಟ್ಟಿ ಪತಿ ನಿಧನರಾಗಿದ್ದು, ಈ ಹಿಂದೆ ಅವರು ನಗರಸಭೆವಾಟರ್ ಅಥಾರಿಟಿಯ ಮೆಕಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಪತಿ ಮರಣದ ನಂತರ ಗೌರಿಕುಟ್ಟಿಗೆ 9,000ರೂಪಾಯಿ ಕುಟುಂಬ ಪಿಂಚಣಿ ದೊರಕುತ್ತಿದೆ. ಈ ಹಣವನ್ನು ಇನ್ನೊಬ್ಬ ಸೊಸೆಗೆ ಕೊಡುತ್ತೀರಾ ಎಂದು ಹೇಳಿ ಕುಟುಂಬ ಮನೆಯಲ್ಲಿ ವಾಸಿಸುತ್ತಿರುವ ಪುತ್ರನ ಪತ್ನಿ ಬಬಿತಾ ಅವರನ್ನು ಹೊಡೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ನಿವೃತ್ತಿ ವೇತನ ಪಾಲುಮಾಡುವ ಕುರಿತು ಗೌರಿಕುಟ್ಟಿಯನ್ನು ಹೊಡೆಯುತ್ತಿದ್ದಾರೆ ಎಂದು ಅವರ ಪುತ್ರಿ ಹೇಳುತ್ತಿದ್ದಾರೆ. ಹೊಡೆತದಿಂದ ನೊಂದಿರುವ ಗೌರಿಕುಟ್ಟಿಯವರನ್ನು ಜಾಗ್ರತಾ ಸಮಿತಿಕಾರ್ಯಕರ್ತರು ಹಾಗೂ ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯರ ಅನುಮತಿ ಪ್ರಕಾರ ಹರಿಪ್ಪಾಡ್ ಎಸ್ಸೈ ಬೈಜು ನೇತೃತ್ವದ ಪೊಲೀಸರು ಗೌರಿಕುಟ್ಟಿಯ ಹೇಳಿಕೆ ಪಡೆದು ಕೊಂಡು ಕೇಸು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆಂದು ವರದಿ ತಿಳಿಸಿದೆ.