ಬಸ್ ದರ ಇಳಿಕೆ ಪ್ರಸ್ತಾವ ವಾಪಸ್ ಕಳುಹಿಸಿದ ದಿಲ್ಲಿ ಲೆಫ್ಟಿನೆಂಟ್ ಗವರ್ನರ್
ಹೊಸದಿಲ್ಲಿ, ಜ.13: ದಿಲ್ಲಿ ಸಾರಿಗೆ ಸಂಸ್ಥೆ(ಡಿಟಿಸಿ)ಯ ಬಸ್ ದರ ಇಳಿಕೆಗೆ ಸಂಬಂಧಿಸಿ ದಿಲ್ಲಿ ಸರಕಾರ ಸಲ್ಲಿಸಿದ್ದ ಪ್ರಸ್ತಾವವನ್ನು ನೂತನ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ತಿರಸ್ಕರಿಸಿದ್ದಾರೆ.
ಎಸಿ ರಹಿತ ಬಸ್‌ಗಳಿಗೆ 5 ರೂ. ಹಾಗೂ ಎಸಿ ಬಸ್‌ಗಳಿಗೆ 10 ರೂ. ಇಳಿಕೆ ಮಾಡುವ ನಿರ್ಧಾರವನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ದಿಲ್ಲಿ ಸಾರಿಗೆ ಸಚಿವ ಸತ್ಯೇಂದ್ರ ಜೈನ್ ಘೋಷಿಸಿದ್ದರು. ಈ ಕುರಿತ ಕಡತದ ಅನುಮತಿಗಾಗಿ ಕಳೆದ ವಾರ ಲೆಫ್ಟಿನೆಂಟ್ ಗವರ್ನರ್(ಎಲ್‌ಜಿ)ಗೆ ಕಳುಹಿಸಿಕೊಡಲಾಗಿತ್ತು.
ಆದರೆ, ಈ ಕಡತವನ್ನು ಲೆಫ್ಟಿನೆಂಟ್ ಗವರ್ನರ್ ಬೈಜಾಲ್ ಬುಧವಾರ ವಾಪಸ್ ನೀಡಿದ್ದಾರೆ. ಆಮ್ ಆದ್ಮಿ ಪಕ್ಷ(ಎಎಪಿ) ಬೈಜಾಲ್‌ಗೆ ಕಳುಹಿಸಿಕೊಟ್ಟ ಮೊದಲ ಪ್ರಮುಖ ಶಿಫಾರಸು ಇದಾಗಿತ್ತು.
ಡಿಟಿಸಿಯ ಕಳಪೆ ಹಣಕಾಸು ಸ್ಥಿತಿಯ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆಯಿಂದ ಪ್ರಸ್ತಾವನೆ ಮರುಪರಿಶೀಲಿಸಲು ಎಲ್‌ಜಿ ಬಯಸಿದ್ದರು. ಹಣಕಾಸು ಇಲಾಖೆ ಇಡೀ ಪ್ರಸ್ತಾವನೆ ಬಗ್ಗೆ ಮತೊಮ್ಮೆ ಪರೀಕ್ಷಿಸಬೇಕು ಎಂದು ಅನಿಲ್ ಬೈಜಾಲ್ ದಿಲ್ಲಿ ಸರಕಾರಕ್ಕೆ ಸೂಚಿಸಿದ್ದಾರೆ.
ಯಾವುದೇ ಪ್ರಸ್ತಾವವನ್ನು ಜಾರಿಗೆ ತರುವ ಮೊದಲು ಹಣಕಾಸು ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ. ಇದೀಗ ಇಡೀ ಪ್ರಸ್ತಾವ ಮತ್ತೊಮ್ಮೆ ಸಂಪುಟ ಸಭೆಯ ಮುಂದೆ ಬರಲಿದ್ದು, ಹಣಕಾಸು ಇಲಾಖೆ ಅನುಮತಿ ನೀಡಿದರೂ ಈ ಪ್ರಸ್ತಾವ ಜಾರಿಗೆ ಬರಲು ಮತ್ತಷ್ಟು ವಿಳಂಬವಾಗಲಿದೆ.