×
Ad

5 ಕೋಟಿ ರೂಪಾಯಿ ಡೀಲ್ ಸಹಿ ಮಾಡಿದ 14ರ ಪೋರ

Update: 2017-01-13 15:17 IST

ಅಹ್ಮದಾಬಾದ್, ಜ.13: ರಾಜ್ಯದಲ್ಲಿ ನಡೆಯುತ್ತಿರುವ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮ್ಮಿಟ್ ನಲ್ಲಿ ಗುರುವಾರ ಕನ್ನಡಕಧಾರಿ ಹಾಗೂ ನೀಲಿ ಬಣ್ಣದ ಸೂಟ್ ಧಾರಿಯಾಗಿದ್ದ 14ರ ಪೋರ ಎಲ್ಲರ ಗಮನ ಸೆಳೆದಿದ್ದಾನೆ. ಏಕಂತೀರಾ ?

ಆತ ಸಹಿ ಹಾಕಿದ್ದಾನೆ ಬರೋಬ್ಬರಿ ರೂ 5 ಕೋಟಿ ಮೊತ್ತದ ಒಪ್ಪಂದವೊಂದಕ್ಕೆ. ತಾನು ವಿನ್ಯಾಸಗೊಳಿಸಿರುವ ಡ್ರೋನ್ ಒಂದರ ಉತ್ಪಾದನೆಗಾಗಿ ಆತ ಈ ಮಹತ್ವದ ಒಪ್ಪಂದವೊಂದಕ್ಕೆರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯೊಂದಿಗೆ ಸಹಿ ಹಾಕಿದ್ದಾನೆ.

ಈ ಪ್ರತಿಭಾನ್ವಿತ ಬಾಲಕನ ಹೆಸರು ಹರ್ಷವರ್ಧನ್ ಝಲಾ. ಹತ್ತನೆ ತರಗತಿಯಲ್ಲಿ ಕಲಿಯುತ್ತಿರುವ ಈತನ ಶಾಲೆ ಬಾಪುನಗರದ ಸರ್ವೋದಯ ವಿದ್ಯಾಮಂದಿರ. ಯುದ್ಧರಂಗದಲ್ಲಿ ನೆಲಬಾಂಬುಗಳನ್ನು ಪತ್ತೆ ಹಚ್ಚಿ ಅವುಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಈತ ತಯಾರಿಸುವ ಡ್ರೋನ್ ಗಳಿಗಿರುತ್ತವೆ. ಈತನ ತರಗತಿಯ ಹೆಚ್ಚಿನ ಸಹಪಾಠಿಗಳು ಮುಂಬರುವ ಬೋರ್ಡ್ ಪರೀಕ್ಷೆಯ ತಲೆಬಿಸಿಯಲ್ಲಿದ್ದರೆ, ಹರ್ಷವರ್ಧನ್ ಮಾತ್ರ ಮೂರು ಪ್ರೊಟೋಟೈಪುಗಳ ಡ್ರೋನ್ ತಯಾರಿಸಿ ತನ್ನ ಮುಂದಿನ ಯೋಜನೆಯ ಬಗ್ಗೆ ಯೋಚಿಸುತ್ತಿದ್ದ.

‘‘ಟಿವಿಯಲ್ಲಿ ಬರುವ ಹಲವಾರು ಸುದ್ದಿಗಳಲ್ಲಿ ಯೋಧರು ನೆಲಬಾಂಬು ಸ್ಫೋಟದಲ್ಲಿ ಸಾವಿಗೀಡಾಗುತ್ತಿರುವ ವಿಷಯ ಹಾಗೂ ಕೆಲವರು ಈ ಬಾಂಬುಗಳನ್ನು ನಿಷ್ಕ್ರಿಯಗೊಳಿಸುವಾಗ ಮೃತಪಟ್ಟ ಬಗ್ಗೆ ತಿಳಿದುಕೊಂಡಿದ್ದೆ. ಇದರಿಂದಾಗಿಯೇ ಈ ಡ್ರೋನ್ ತಯಾರಿಸುವ ಯೋಚನೆ ಬಂತು,’’ ಎಂದು ಹೇಳುವ ಹರ್ಷವರ್ಧನ್ ತನ್ನ ಡ್ರೋನ್ ಗಳಿಗಾಗಿ ರೂ.5 ಲಕ್ಷದ ತನಕ ಖರ್ಚು ಮಾಡಿದ್ದಾನೆ. ಮೊದಲ ಎರಡು ಪ್ರೊಟೊಟೈಪ್ ಡ್ರೋನ್ ಗಳಿಗೆ ಆತನ ಹೆತ್ತವರು ಎರಡು ಲಕ್ಷ ನೀಡಿದ್ದರೆ, ಮೂರನೇ ಪ್ರೊಟೊಟೈಪ್ ಡ್ರೋನ್ ತಯಾರಿಗೆ ರಾಜ್ಯ ಸರಕಾರ ರೂ.3 ಲಕ್ಷ ಅನುದಾನ ಒದಗಿಸಿತ್ತು.

ಈತ ತಯಾರಿಸಿರುವ ಡ್ರೋನ್ ನಲ್ಲಿ ಇನ್‌ಫ್ರಾರೆಡ್, ಆರ್ ಜಿಬಿ ಸೆನ್ಸರ್, ಥರ್ಮಲ್ ಮೀಟರ್, 31 ಮೆಗಾ ಪಿಕ್ಸೆಲ್ ಕ್ಯಾಮರಾ ಹಾಗೂ ಮೆಕ್ಯಾನಿಕಲ್ ಶಟರ್ ಇದ್ದು ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯ ಅದಕ್ಕಿದೆ. ಈ ಡ್ರೋನ್ ನಲ್ಲಿ 50 ಗ್ರಾಂ ತೂಕದ ಬಾಂಬ್ ಕೂಡ ಇದ್ದು ಇದು ನೆಲಬಾಂಬನ್ನು ನಾಶಗೊಳಿಸುವ ಶಕ್ತಿ ಹೊಂದಿರುತ್ತದೆ.

ಈಗಾಗಲೇ ಪೇಟೆಂಟ್ ಗೆ ಅರ್ಜಿ ಸಲ್ಲಿಸಿರುವ ಈ ಬಾಲಕನ ಕಂಪೆನಿಯ ಹೆಸರು ಎರೊಬೋಟಿಕ್ಸ್.

ಹರ್ಷವರ್ಧನನ ತಂದೆ ಪ್ರದ್ಯುಮಾನ್ ಸಿನ್ಹ ಝಲಾ ನರೋಡಾದ ಪ್ಲಾಸ್ಟಿಕ್ ಕಂಪೆನಿಯೊಂದರಲ್ಲಿ ಅಕೌಂಟೆಂಟ್ ಆಗಿದ್ದರೆ ತಾಯಿ ನಿಷಬ ಝಲಾ ಗೃಹಿಣಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News