×
Ad

ಜಲ್ಲಿಕಟ್ಟು ಪರ ಆರ್‌ಎಸ್‌ಎಸ್ ಬ್ಯಾಟಿಂಗ್

Update: 2017-01-13 15:28 IST

 ಹೊಸದಿಲ್ಲಿ, ಜ.13: ತಮಿಳುನಾಡಿನಲ್ಲಿ ಪೋಂಗಲ್ ಹಬ್ಬದೊಂದಿಗೆ ತಳುಕುಹಾಕಿಕೊಂಡಿರುವ ಜಾನಪದ ಕ್ರೀಡೆ ಜಲ್ಲಿಕಟ್ಟು ವಿರುದ್ಧ ಹೇರಲಾಗಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಲು ನಿರಾಕರಿಸಿದ ಮರುದಿನವೇ ಆರ್‌ಎಸ್‌ಎಸ್ ಜಲ್ಲಿಕಟ್ಟು ಪರ ಬ್ಯಾಟಿಂಗ್ ಮಾಡಿದೆ.

‘‘ತಮಿಳುನಾಡಿನ ಸಾಂಪ್ರದಾಯಿಕ ಕೃಷಿಯೊಂದಿಗೆ ಸಂಬಂಧ ಹೊಂದಿರುವ ಜಲ್ಲಿಕಟ್ಟು ಒಂದು ಸಾಂಪ್ರದಾಯಿಕ ಹಬ್ಬವಾಗಿದೆ. ರಾಜ್ಯದಲ್ಲಿರುವ ಸಂಘದ ಸಂಘಟನೆಗಳು ಜಲ್ಲಿಕಟ್ಟು ಪರವಾಗಿವೆ. ಜಲ್ಲಿಕಟ್ಟು ಹಬ್ಬವೆಂದರೆ ಪ್ರಾಣಿಗಳೊಂದಿಗೆ ಆಟವಷ್ಟೇ. ಯಾವುದೇ ಎತ್ತು, ಗೂಳಿ ಅಥವಾ ಒಂಟೆಯನ್ನು ಕೊಲ್ಲುವ ಆಚರಣೆ ಇಲ್ಲಿ ಕಂಡುಬರುವುದಿಲ್ಲ’’ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತ ಸಹ-ಪ್ರಚಾರ್ ಪ್ರಮುಖ್ ಜೆ. ನಂದಕುಮಾರ್ ನ್ಯೂಸ್-18ಕ್ಕೆ ತಿಳಿಸಿದ್ದಾರೆ.

ಮಕರ ಸಂಕ್ರಾಂತಿಗೆ ಮೊದಲು ರಾಜ್ಯದ ಜನಪ್ರಿಯ ಜಾನಪದ ಕ್ರೀಡೆ ಜಲ್ಲಿಕಟ್ಟು ನಡೆಸಲು ಅನುಮತಿ ನೀಡಬೇಕೆಂದು ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.

ರಾಜ್ಯದ ಆಡಳಿತಾರೂಢ ಎಐಎಡಿಎಂಕೆ ಹಾಗೂ ಪ್ರತಿಪಕ್ಷ ಡಿಎಂಕೆ ಪಕ್ಷಗಳೆರಡೂ ಜಲ್ಲಿಕಟ್ಟು ಜಾನಪದ ಕ್ರೀಡೆ ಪುನರಾರಂಭಿಸುವ ಬಗ್ಗೆ ಒಲವು ಹೊಂದಿವೆ. ಈ ಬಗ್ಗೆ ಕೇಂದ್ರ ಸರಕಾರ ಆಧ್ಯಾದೇಶ ಹೊರಡಿಸಲಿದೆ ಎಂದು ಉಭಯ ಪಕ್ಷಗಳು ನಿರೀಕ್ಷೆ ಹೊಂದಿವೆ.

ಕೇಂದ್ರದ ವಿರುದ್ಧ ಡಿಎಂಕೆ ಪ್ರತಿಭಟನೆ: ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಪಕ್ಷ ಚೆನ್ನೈನ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಶುಕ್ರವಾರ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

‘‘ಜಲ್ಲಿಕಟ್ಟು ನಮ್ಮ ಜಾನಪದ ಸಂಪ್ರದಾಯ. ಆದರೆ, ಇದನ್ನು ಆಚರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಅನುಮತಿ ನೀಡಲು ವಿಫಲವಾಗಿವೆ. ಕೇಂದ್ರ ಸರಕಾರ ತಕ್ಷಣವೇ ಆಧ್ಯಾದೇಶ ಹೊರಡಿಸಿ ಜಲ್ಲಿಕಟ್ಟು ಆಚರಿಸಲು ಅನುವು ಮಾಡಿಕೊಡಬೇಕು’’ ಎಂದು ಸ್ಟಾಲಿನ್ ಆಗ್ರಹಿಸಿದ್ದಾರೆ.

‘‘ಪೊಂಗಲ್ ಹಬ್ಬದಲ್ಲಿ ಜಲ್ಲಿಕಟ್ಟು ಅವಿಭಾಜ್ಯ ಅಂಗವಾಗಿದೆ. ತಮಿಳುನಾಡಿನ ಜನತೆಗೆ ಈ ಹಬ್ಬ ಅತ್ಯಂತ ಮಹತ್ವದ್ದಾಗಿದೆ’’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಪನ್ನೀರ್‌ ಸೆಲ್ವಂ ಪತ್ರದ ಮೂಲಕ ಮನವರಿಕೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News