ಸೇನೆಯಲ್ಲಿ ಶೋಷಣೆ ವಿರುದ್ಧ ಸೈನಿಕರ ವೀಡಿಯೊ ದಾಳಿ !
ಹೊಸದಿಲ್ಲಿ, ಜ.13: ಯೋಧರಿಂದ ತಾನು ಎದುರಿಸುತ್ತಿದ್ದ ಶೋಷಣೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ದೂರು ನೀಡಿದ್ದಕ್ಕಾಗಿ ಹಿರಿಯ ಅಧಿಕಾರಿಗಳು ತನಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ ಎಂದು ಯೋಧನೊಬ್ಬ ಅಳಲು ತೋಡಿಕೊಳ್ಳುತ್ತಿರುವ ಹೊಸ ವೀಡಿಯೊವೊಂದು ಶುಕ್ರವಾರ ಬಹಿರಂಗವಾಗಿದೆ.
ಬಿಎಸ್‌ಎಫ್ ಯೋಧ ಹಾಗೂ ಸಿಆರ್‌ಪಿಎಫ್ ಕಾನ್ಸ್‌ಸ್ಟೇಬಲ್‌ರಿಂದ ಇದೇ ರೀತಿಯ ದೂರುಗಳಿರುವ ವೀಡಿಯೋ ಪ್ರಸಾರವಾದ ಬಳಿಕ ಇದೀಗ ಮತ್ತೊಂದು ವಿಡಿಯೋ ಬಯಲಿಗೆ ಬಂದಿದೆ.
ಡೆಹ್ರಾಡೂನ್‌ನ 42 ಇನ್‌ಫ್ರಾಂಟ್ರಿ ಬ್ರಿಗೇಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಲ್ಯಾನ್ಸ್ ನಾಯಕ್ ಪ್ರಜ್ಞಾ ಪ್ರತಾಪ್ ಸಿಂಗ್ ವಿಡಿಯೋದಲ್ಲಿ ಮಾತನಾಡುತ್ತಾ,‘‘ ಕಳೆದ ವರ್ಷ ಜೂನ್‌ನಲ್ಲಿ ತಾನು ಯೋಧರಿಂದ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಪ್ರಧಾನಮಂತ್ರಿ, ರಕ್ಷಣಾ ಸಚಿವರು, ರಾಷ್ಟ್ರಪತಿ ಹಾಗೂ ಸುಪ್ರೀಂಕೋರ್ಟ್‌ಗೆ ಪತ್ರ ಬರೆದಿದ್ದೆ. ಈ ಸಮಸ್ಯೆಯ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಮಂತ್ರಿ ಕಾರ್ಯಾಲಯ ನಮ್ಮ ಬ್ರಿಗೇಡ್‌ಗೆ ಮಾಹಿತಿ ನೀಡಿದ್ದರು. ಆದರೆ, ತಾನೆದುರಿಸುತ್ತಿರುವ ಸಮಸ್ಯೆಯ ಬಗ್ಗೆ ತನಿಖೆ ನಡೆಸುವ ಬದಲು ಮೇಲಧಿಕಾರಿಗಳು ನನಗೆ ಕಿರುಕುಳ ನೀಡಲಾರಂಭಿಸಿದರು. ಸೇನಾ ವಿಚಾರಣೆಗೂ ಗುರಿಪಡಿಸಿದರು ಎಂದು ಹೇಳಿದ್ದಾರೆ.
ನಾನು ಪ್ರಧಾನಮಂತ್ರಿಗೆ ಬರೆದ ಪತ್ರದಲ್ಲಿ ಯಾವುದೇ ಸೂಕ್ಷ್ಮ ವಿಷಯವನ್ನು ಬಹಿರಂಗ ಮಾಡಿಲ್ಲ. ಸೈನಿಕರು ಸಹಾಯಕರಾಗಿರಬೇಕು ಹೊರತು ಅವರನ್ನು ಅಧಿಕಾರಿಗಳ ಶೂ ಸ್ವಚ್ಛ ಮಾಡಿಸಲು ಬಳಸಬಾರದು ಎಂದು ಪತ್ರದಲ್ಲಿ ಬರೆದಿದ್ದೆ ಎಂದು ಸಿಂಗ್ ಹೇಳಿದ್ದಾರೆ.
ಪ್ರಧಾನಮಂತ್ರಿ ಕಚೇರಿಯಿಂದ ವಿಷಯದ ತನಿಖೆ ನಡೆಸುವಂತೆ ಆದೇಶ ಬಂದಾಗ ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಒತ್ತಡ ಹಾಕಿ, ಕಿರುಕುಳ ನೀಡಲಾರಂಭಿಸಿದರು. ಆದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ನನ್ನ ಸೇವೆಗೆ ಕಳಂಕ ತಂದವರ ವಿರುದ್ಧ ಕ್ರಮಕ್ಕೆ ಮುಂದಾಗಲಿಲ್ಲ. ನನ್ನನ್ನು ವಿನಾಕಾರಣ ಸೇನಾ ವಿಚಾರಣೆಗೆ ಗುರಿಪಡಿಸಲಾಯಿತು ಎಂದು ಸಿಂಗ್ ವೀಡಿಯೊದಲ್ಲಿ ಹೇಳಿದ್ದಾರೆ.