ಕಾಶ್ಮೀರ ಶಾಂತಿಗೂ ನೋಟು ರದ್ದತಿಗೂ ನಂಟು ಬೇಡ, ಇನ್ನೂ ಕೆಟ್ಟದ್ದು ಮುಂದೆ ಬರಲಿದೆ:ಯಶ್ವಂತ್ ಸಿನ್ಹಾ ಎಚ್ಚರಿಕೆ
ಶ್ರೀನಗರ,ಜ.13: ಕಳೆದ ವರ್ಷದ ಹೆಚ್ಚಿನ ಭಾಗವಿಡೀ ಅಶಾಂತಿಯ ದಳ್ಳುರಿಯಲ್ಲಿ ಬೆಂದಿದ್ದ ಕಾಶ್ಮೀರದಲ್ಲಿನ ಸದ್ಯದ ಶಾಂತಿಗೂ ಪ್ರಧಾನಿ ಮೋದಿಯವರ ನೋಟು ರದ್ದತಿ ಕ್ರಮಕ್ಕೂ ತಳುಕು ಹಾಕುವುದು ಬೇಡ. ಇನ್ನೂ ಕೆಟ್ಟದ್ದು ಇನ್ನು ಮುಂದೆ ಸಂಭವಿಸಬಹುದು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಯಶ್ವಂತ ಸಿನ್ಹಾ ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರತ್ಯೇಕತಾವಾದಿಗಳು ಸೇರಿದಂತೆ ಕಾಶ್ಮೀರ ಬಿಕ್ಕಟ್ಟಿನಲ್ಲಿ ಪಾಲುದಾರರೊಂದಿಗೆ ಮಾತುಕತೆ ನಡೆಸಲು ನಿಯೋಗವೊಂದರ ನೇತೃತ್ವ ವಹಿಸಿ ಇಲ್ಲಿಗೆ ಭೇಟಿ ನೀಡಿರುವ ಅವರು, ನೋಟು ರದ್ದತಿಯು ಭಯೋತ್ಪಾದನೆಗೆ ಹಣಕಾಸು ನೆರವಿಗೆ ಕಡಿವಾಣ ಹಾಕಿದೆ ಎಂಬ ಕೇಂದ್ರ ಸರಕಾರದ ಹೇಳಿಕೆಯನ್ನು ಪ್ರಸ್ತಾಪಿಸಿದರು. ವಾಸ್ತವದಲ್ಲಿ ತನಗೆ ಅಂತಹುದೇನೂ ಕಂಡುಬರುತ್ತಿಲ್ಲ. ನೋಟು ರದ್ದತಿಗೂ ಕಾಶ್ಮೀರದಲ್ಲಿನ ಸದ್ಯದ ಶಾಂತಿಗೂ ತಳುಕು ಹಾಕುವ ಅವಸರ ಬೇಡ. ಇಂದು ನಾವು ಕಾಣುತ್ತಿರುವ ಶಾಂತಿ ಸ್ಥಿರವಲ್ಲ, ಏಕೆಂದರೆ ಒಳಗೊಳಗೆ ಹೊಗೆಯಾಡುತ್ತಿರುವ ಉದ್ವಿಗ್ನತೆಯು ಯಾವುದೇ ಕ್ಷಣಕ್ಕೂ ಸ್ಫೋಟಗೊಳ್ಳಬಹುದು ಎಂದು ಅವರು ಹೇಳಿದರು.
ಕಾಶ್ಮೀರ ಬಿಕ್ಕಟ್ಟು ಕುರಿತಂತೆ,ನಾವೇ ನಮ್ಮ ಸ್ವಂತ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಅದರ ಲಾಭವನ್ನು ಬೇರೆಯವರು ಪಡೆದುಕೊಳ್ಳುತ್ತಾರೆ. ಇದರೊಂದಿಗೆ ತಪ್ಪುಗ್ರಹಿಕೆಗಳು ಇನ್ನಷ್ಟು ಹೆಚ್ಚುತ್ತವೆ,ಕಂದರವು ಇನ್ನಷ್ಟು ಆಳವಾಗುತ್ತದೆ ಮತ್ತು ಅಂತಿಮವಾಗಿ ಅದು ರಕ್ತಪಾತಕ್ಕೆ ಕಾರಣವಾಗುತ್ತದೆ ಎಂದು ಸಿನ್ಹಾ ನುಡಿದರು.