×
Ad

ದಲಿತರೊಡನೆ ಪುತ್ತೂರು ಶಾಸಕಿ ಚೆಲ್ಲಾಟ - ದಲಿತ ಮುಖಂಡರ ಆರೋಪ

Update: 2017-01-13 17:57 IST

ಪುತ್ತೂರು, ಜ.13 : ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ವಿಚಾರದಲ್ಲಿ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅವರು ಅಂಬೇಡ್ಕರ್ ವಿರೋಧಿ ಹಾಗೂ ದಲಿತ ಅಭಿವೃದ್ಧಿ ವಿರೋಧಿ ಧೋರಣೆ ತೋರುತ್ತಿದ್ದು, ದಲಿತರೊಂದಿಗೆ ಚೆಲ್ಲಾಟವಾಡಿದಲ್ಲಿ ಅವರ ರಾಜಕೀಯಕ್ಕೆ ಇತಿಶ್ರೀ ಹಾಡುವ ಕಾಲ ಬರಲಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಂ. ಕೂಸಪ್ಪ ಎಚ್ಚರಿಸಿದ್ದಾರೆ.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ತಾಲೂಕು ಮಟ್ಟದ ಅಂಬೇಡ್ಕರ್ ಭವನವನ್ನು ತಾಲೂಕಿನ ಕೇಂದ್ರ ಸ್ಥಾನದಲ್ಲಿ ನಿರ್ಮಿಸುವಂತೆ ಕಳೆದ ಹಲವಾರು ವರ್ಷಗಳಿಂದ ದಲಿತ ಸಂಘಟನೆಗಳು ಬೇಡಿಕೆ ಸಲ್ಲಿಸುತ್ತಲೇ ಇದ್ದಾರೆ. ಆದರೆ ಇದೀಗ ಶಾಸಕರು ಅಂಬೇಡ್ಕರ್ ಭವನವನ್ನು ಕೇಂದ್ರ ಸ್ಥಾನದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಗುಂಪುಕಲ್ಲು ಚಿಂಗಾಣಿ ಎಂಬಲ್ಲಿ ನಿರ್ಮಿಸಲು ಮುಂದಾಗಿದ್ದಾರೆ. ಈ ಸ್ಥಳವು ಯಾವುದೇ ರೀತಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸೂಕ್ತವಲ್ಲ. ಇಲ್ಲಿ ನಿರ್ಮಿಸುವುದಕ್ಕೆ ದಲಿತ ಸಂಘಟನೆಗಳ ವಿರೋಧವಿದೆ. ಕೇಂದ್ರಸ್ಥಾನದಿಂದ ದೂರದ ಮೂಲೆಯಲ್ಲಿ ಅಂಬೇಡ್ಕರ್ ಭವನ ಸ್ಥಾಪನೆಗೆ ಮುಂದಾಗಿರುವ ಶಾಸಕರ ನಿಲುವು ಅನುಮಾನಾಸ್ಪದವಾಗಿದೆ ಎಂದು ಆರೋಪಿಸಿದರು.

ಅಂಬೇಡ್ಕರ್ ಭವನದ ವಿಚಾರದಲ್ಲಿ ತನ್ನ ನಿಲುವಿಗೆ ಸ್ಪಂದನೆ ಸಿಗದಿರುವ ಕಾರಣ ಶಾಸಕಿ ಅವರು ಅಂಬೇಡ್ಕರ್ ಅನುದಾನ ಹೋದ್ರೆ ಹೋಗಲಿ ಎಂಬ ಹೇಳಿಕೆ ನೀಡಿದ್ದು, ದಲಿತರ ಬೇಡಿಕೆಗೆ ಸ್ಪಂದಿಸದ ಶಾಸಕಿ ಅವರು ದಲಿತರನ್ನು ಮೂರ್ಖರೆಂದು ತಿಳಿಯುವುದು ಬೇಡ. ನಮ್ಮ ಬೇಡಿಕೆಯಂತೆ ರಿಜಿಸ್ಟ್ರಾರ್ ಕಚೇರಿ, ತಹಸೀಲ್ದಾರ್ ಕಚೇರಿ ಅಥವಾ ಹಳೆ ಪುರಭವನ ಕಚೇರಿ ಬಳಿಯಲ್ಲಿ ಸಾಕಷ್ಟು ಸರ್ಕಾರಿ ಸ್ಥಳಗಳಿದ್ದು ಇಲ್ಲಿಯೇ ಅಂಬೇಡ್ಕರ್ ಭವನ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜ.17ರಂದು ಸಮಾಜ ಕಲ್ಯಾಣ ಸಚಿವರು ಪುತ್ತೂರಿಗೆ ಆಗಮಿಸುವ ಮಾಹಿತಿಯಿದ್ದು, ಸಂಘಟನೆಯ ವತಿಯಿಂದ ಅವರ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದ ಅವರು,  ನಮ್ಮ ಹೋರಾಟ ಶಾಸಕರ ವಿರುದ್ಧ ನಡೆಯಲಿದೆ. ಅಂಬೇಡ್ಕರ್ ಭವನ ನಿರ್ಮಾಣ ವಿಚಾರದಲ್ಲಿ ಶಾಸಕರು ತನ್ನ ನಿಲುವು ಬದಲಾಯಿಸುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು, ತಾಲೂಕು ಅಧ್ಯಕ್ಷ ಗಿರಿಧರ ನಾಯ್ಕ, ಕನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಆನಂದ ಮಿತ್ತಬೈಲ್, ತಾಲೂಕು ಸಂಘಟನಾ ಸಂಚಾಲಕ ಬಾಬು ಎನ್ ಸವಣೂರು, ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವಿಶ್ವನಾಥ ಅಲೆಕ್ಕಾಡಿ, ಮೊಗೇರ ಯುವ ವೇದಿಕೆ ಅಧ್ಯಕ್ಷ ಶೇಖರ ಮಾಡಾವು, ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ ಸುಂದರ ನಿಡ್ಪಳಿ, ಮುಖಂಡರಾದ ಸುಂದರ ಶೇಖಮಲೆ, ಕೊರಗಪ್ಪ ಈಶ್ವರಮಂಗಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News