ಮುಕ್ತ ಬ್ಯಾಡ್ಮಿಂಟನ್ ಟೂರ್ನ್‌ಮೆಂಟ್‌ಗೆ ಚಾಲನೆ
ಮಂಗಳೂರು, ಜ.13: ಮಂಗಳಾ ಬ್ಯಾಡ್ಮಿಂಟನ್ ಕ್ಲಬ್ ಆಶ್ರಯದಲ್ಲಿ ನಗರದ ಲಾಲ್‌ಬಾಗ್‌ನ ಯು. ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕರ್ನಾಟಕ ಮತ್ತು ಕೇರಳ ರಾಜ್ಯ ಮುಕ್ತ ಬ್ಯಾಡ್ಮಿಂಟನ್ ಟೂರ್ನಮೆಂಟ್‌ಗೆ ಶುಕ್ರವಾರ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ಪಟು ಮೋಹಿತ್ ಕಾಮತ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಬ್ಯಾಡ್ಮಿಂಟನ್‌ಗೆ ಮಂಗಳಾ ಬ್ಯಾಡ್ಮಿಂಟನ್ ಕ್ಲಬ್ ಉತ್ತಮ ರೀತಿಯಲ್ಲಿ ಪ್ರೊತ್ಸಾಹ ನೀಡುತ್ತಿದೆ. ಇದನ್ನು ಸದುಪಯೋಗಪಡಿಸುವ ಅಗತ್ಯವಿದೆ ಎಂದರು.
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಸುಧಾಕರ ಬಿ.ಎನ್. ಮಾತನಾಡಿ, ಮನುಷ್ಯನ ಬದುಕಿನಲ್ಲಿ ಮೂರು ಹಂತಗಳು ಬಹಳ ಪ್ರಮುಖವಾದದ್ದು. ಮೊದಲ ಹಂತದಲ್ಲಿ ಸಾಕಷ್ಟು ಶಕ್ತಿ ಇರುತ್ತದೆ. ಆದರೆ ದುಡ್ಡು ಇರುವುದಿಲ್ಲ. ದ್ವಿತೀಯ ಹಂತದಲ್ಲಿ ಶಕ್ತಿ ಮತ್ತು ದುಡ್ಡು ಎರಡೂ ಇರುತ್ತದೆ. ಮೂರನೇ ಹಂತದಲ್ಲಿ ದುಡ್ಡು ಇರುತ್ತದೆ. ಆದರೆ ಶಕ್ತಿ ಇರುವುದಿಲ್ಲ. ಹಾಗಾಗಿ ಮೊದಲ ಎರಡು ಹಂತಗಳನ್ನು ಬಳಸಿಕೊಳ್ಳುವ ಅಗತ್ಯವಿದೆ ಎಂದರು.
ಈ ಸ್ಪರ್ಧೆಯಲ್ಲಿ ಶುಕ್ರವಾರ ಜೂನಿಯರ್ ವಿಭಾಗದಲ್ಲಿ 240 ತಂಡಗಳು ಭಾಗವಹಿಸಿದ್ದವು. ಜೂನಿಯರ್ ವಿಭಾಗದಲ್ಲಿ ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಶನಿವಾರ ನಡೆಯಲಿರುವ ಹಿರಿಯರ ವಿಭಾಗದಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಿಂದ 200ಕ್ಕೂ ಅಧಿಕ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಕೇರಳದಿಂದ 40 ತಂಡಗಳು ಆಗಮಿಸಲಿವೆ ಎಂದು ಮಂಗಳಾ ಬ್ಯಾಡ್ಮಿಂಟ್ ಕ್ಲಬ್‌ನ ಕಾರ್ಯದರ್ಶಿ ದೀಪಕ್ ಹೇಳಿದರು.
ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಡಿಕೆಡಿಬಿಎ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಯುವಜನ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜ, ಮಂಗಳಾ ಬ್ಯಾಡ್ಮಿಂಟನ್ ಕ್ಲಬ್ ಅಧ್ಯಕ್ಷ ಎ.ಎಸ್. ವೆಂಕಟೇಶ್, ಉದ್ಯಮಿ ಸುಭಾಶ್ಚಂದ್ರ ಪ್ರಭು, ಪರಿಮಲೆಗನ್, ಅಶೋಕ್ ಹೆಗ್ಡೆ, ಎ.ಕೆ. ನಿಯಾಝ್, ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.