×
Ad

ಫಿಲೋಮಿನಾದಲ್ಲಿ ಕೌಶಲ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರದ ಉದ್ಘಾಟನೆ

Update: 2017-01-13 18:52 IST

ಪುತ್ತೂರು , ಜ.13 : ಆರ್ಥಿಕ ಶುದ್ಧೀಕರಣ ಮತ್ತು ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾಭಿಮಾನದ ಬದುಕನ್ನು ಹೊಂದುವ ಮೂಲಕ ಭಾರತವು ವಿಶ್ವ ಗುರುವಿನ ಸ್ಥಾನಮಾನ ಪಡೆಯಲು ಸನ್ನದ್ಧವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.

 ಅವರು ಶುಕ್ರವಾರ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಭಾರತ ಸರ್ಕಾರದ ವಿನೂತನ ಯೋಜನೆಯಡಿಯಲ್ಲಿ ಆರಂಭಿಸಲಾದ ಕೌಶಲ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರದ ಉದ್ಘಾಟನೆ ಮತ್ತು ಎಲೆಕ್ಟ್ರಾನಿಕ್ ಕೌಶಲ ತರಬೇತಿ ಕೇಂದ್ರದ ಜಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು.

 ಭಾರತ ದೇಶವು ತನ್ನ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಐವತ್ತಕ್ಕೂ ಮಿಕ್ಕಿ ಯುವಜನ ಸಂಪತ್ತನ್ನು ಹೊಂದಿದೆ. ಇಂತಹ ಅಮೂಲ್ಯವಾದ ಮಾನವ ಸಂಪತ್ತಿನ ಸಮರ್ಪಕ ಬಳಕೆ ದೇಶದ ಆರ್ಥಿಕ ಪ್ರಗತಿಗೆ ಉಪಯೋಗವಾಗಬೇಕೆಂಬ ಸದುದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಯೋಗ ಸೃಷ್ಟಿ ಮತ್ತು ಕೌಶಲ ವೃದ್ಧಿಗೊಳಿಸುವ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಹೇಳಿದರು.

ಭಾರತ ಸರ್ಕಾರದ ಐಟಿ ಮತ್ತು ಎಲೆಕ್ಟ್ರಾನಿಕ್ ಸೆಕ್ಟರ್‌ನ ರಾಷ್ಟ್ರೀಯ ಸಮಿತಿಯ ಚೆಯರ್‌ಮೆನ್ ಡಾ. ವಿಜಯ ಕುಮಾರ್ ಎಲ್ ಅವರು ಉದ್ಘಾಟಿಸಿದರು.

ಕೇಂದ್ರ ಸರ್ಕಾರವು ಯುವಜನಾಂಗವನ್ನು ಗಮನದಲ್ಲಿಟ್ಟುಕೊಂಡು ಹಲವಾರು ರೀತಿಯ ಉದ್ಯೋಗ ಸೃಷ್ಟಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಅಗತ್ಯವಿರುವ ತರಬೇತಿಯನ್ನು ನೀಡಲು ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ಎಲೆಕ್ಟ್ರಾನಿಕ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ ಅಫ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥ ಶ್ರೀನಿವಾಸ್ ಎ ಎನ್ ಅವರು ಮಾತನಾಡಿ, ನಾವು ಉಪಯೋಗಿಸುವ ಪ್ರತಿಯೊಂದು ವಸ್ತುವಿನಲ್ಲಿಯೂ ಎಲೆಕ್ಟ್ರಾನಿಕ್ ಸಾಮಾಗ್ರಿಯ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಎಲೆಕ್ಟ್ರಾನಿಕ್ ಕೌಶಲ ತರಬೇತಿ ಕೇಂದ್ರವನ್ನು ಜಾರಿಗೊಳಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದೆ ಎಂದರು.

ಪ್ರಧಾನ ಮಂತ್ರಿ ಜನ್ ಔಷಧಿ ಯೋಜನೆಯ ಡೈರೆಕ್ಟರ್ ಜನರಲ್ ಹಾಗೂ ಎಲೆಕ್ಟ್ರಾನಿಕ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ ಅಫ್ ಇಂಡಿಯಾದ ಉಪಾಧ್ಯಕ್ಷ ರೋಹಿತ್ ಮೆಹ್ರ, ಸಂತ ಫಿಲೋಮಿನಾ ಕಾಲೇಜಿನ ಸಂಚಾಲಕ ಆಲ್ಫ್ರೆಡ್ ಜೆ ಪಿಂಟೊ, ಕ್ಯಾಂಪಸ್ ನಿರ್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮತ್ತು ಭಾರತ ಸರ್ಕಾರದ ಬಿಎಸ್‌ಎಸ್ ನೀತಿ ಆಯೋಗದ ಜಿಲ್ಲಾಧ್ಯಕ್ಷ ಡಾ. ಅನಿಲಾ ದೀಪಕ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿದ್ದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಯೊ ನೊರೊನ್ಹ ಸ್ವಾಗತಿಸಿದರು.

ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಗಣೇಶ ಭಟ್  ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News