ರಸ್ತೆಯ ಬಳಿಕ ಈಗ ಹಡಗುಗಳ ಟ್ರಾಫಿಕ್ ಜಾಮ್ !
Update: 2017-01-13 20:08 IST
ಬೀಜಿಂಗ್, ಜ. 13: ಚೀನಾದ ಪ್ರಮುಖ ತಿಯಾನ್‌ಜಿನ್ ಮತ್ತು ಕವೊಫೀಡಿಯನ್ ಬಂದರುಗಳಲ್ಲಿ ಕಲ್ಲಿದ್ದಲು ಮತ್ತು ಕಬ್ಬಿಣದ ಅದಿರನ್ನು ಹೊತ್ತ ನೂರಾರು ಹಡಗುಗಳು ಜಮೆಯಾಗಿದ್ದು ಬೃಹತ್ ‘ಟ್ರಾಫಿಕ್ ಜಾಮ್’ ಉಂಟಾಗಿದೆ.
ಚಳಿಗಾಲ ಮತ್ತು ಈ ತಿಂಗಳ ಕೊನೆಯ ವೇಳೆ ಬರುವ ಹೊಸ ವರ್ಷದ ಸಂಭ್ರಮಗಳ ಹಿನ್ನೆಲೆಯಲ್ಲಿ ಚೀನಾದ ಆಮದು ಬೇಡಿಕೆ ಹೆಚ್ಚಾಗಿರುವುದನ್ನು ಸ್ಮರಿಸಬಹುದಾಗಿದೆ.
ದಟ್ಟ ಧೂಮ ಆವರಿಸಿರುವ ಹಿನ್ನೆಲೆಯಲ್ಲಿ ಬೆಳಕಿನ ಅಭಾವದಿಂದಾಗಿ ಉತ್ತರ ಚೀನಾದ ಪ್ರಮುಖ ಬಂದರುಗಳು ಡಿಸೆಂಬರ್ 20ರ ಬಳಿಕ ಹಲವು ಬಾರಿ ಹಡಗುಗಳಿಗೆ ಸರಕು ಹೇರುವುದನ್ನು ನಿಲ್ಲಿಸಿದ್ದವು.
ಇದರಿಂದಾಗಿ, ನೂರಾರು ಹಡಗುಗಳಿಗೆ ತಿಯಾನ್‌ಜಿನ್ ಮುಂತಾದ ಚೀನಾದ ಪ್ರಮುಖ ಕೈಗಾರಿಕಾ ವಲಯಗಳಿಗಾಗಿ ಹೇರಿಕೊಂಡು ಬಂದಿರುವ ಸರಕನ್ನು ಇಳಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಅವುಗಳು ಚೀನಾದ ಬೊಹಾಯ್ ಕೊಲ್ಲಿಯಲ್ಲಿ ಕಾಯುತ್ತಿದ್ದವು.