ಮಂಗಳೂರು : ಇಸ್ಲಾಮ್ ಕುರಿತ ಮಾಹಿತಿ-ಪ್ರದರ್ಶನ ‘ದಿ ಮಿರಾಕಲ್’ಗೆ ಅಭೂತಪೂರ್ವ ಪ್ರತಿಕ್ರಿಯೆ
ಮಂಗಳೂರು, ಜ.13: ಕರ್ನಾಟಕ ಸಲಫಿ ಅಸೋಸಿಯೇಶನ್ ನಗರದ ನೆಹರೂ ಮೈದಾನದಲ್ಲಿ ಸೋಮವಾರದಿಂದ ಆಯೋಜಿಸಿರುವ ಇಸ್ಲಾಮ್ ಕುರಿತ ಮಾಹಿತಿ-ಪ್ರದರ್ಶನ ‘ದಿ ಮಿರಾಕಲ್’ಗೆ ಅಭೂತಪೂರ್ವ ಸ್ಪಂದನ ವ್ಯಕ್ತವಾಗಿದೆ. ಹಿಂದೂ, ಮುಸ್ಲಿಮ್, ಕ್ರಿಶ್ಚಿಯರು ಸೇರಿದಂತೆ ದಿನಂಪ್ರತಿ ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿ ‘ಇಸ್ಲಾಮ್’ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಅದರಲ್ಲೂ ಶಾಲಾ ಕಾಲೇಜು ವಿದ್ಯಾರ್ಥಿಗಳು ತೀವ್ರ ಆಸಕ್ತಿಯಿಂದ ಶಿಕ್ಷಕ ವರ್ಗದ ಜೊತೆಗೂಡಿ ಬರುತ್ತಿದ್ದಾರೆ. ಹೀಗೆ ಬಂದು ಹೋಗುವವರು ಕಿಂಚಿತ್ತೂ ನಿರಾಶೆಗೊಳಗಾಗದಂತೆ ಕರ್ನಾಟಕ ಸಲಫಿ ಅಸೋಸಿಯೇಶನ್‌ನ ಸ್ವಯಂಸೇವಕರು ಮನಮುಟ್ಟುವಂತೆ ವಿವರಣೆ ನೀಡುತ್ತಿದ್ದಾರೆ.
ಈ ಮಾಹಿತಿ-ಪ್ರದರ್ಶನ ‘ದಿ ಮಿರಾಕಲ್’ಗೆ ಸರ್ವ ಧರ್ಮೀಯರಿಗೂ ಮುಕ್ತ ಅವಕಾಶ ನೀಡಲಾಗಿತ್ತು. ಅದರಂತೆ ಜಾತಿ, ಮತ, ಭೇದವಿಲ್ಲದೆ ಜನರು ಸ್ವಯಂ ಆಸಕ್ತಿಯಿಂದ ಭೇಟಿ ನೀಡುತ್ತಿದ್ದಾರೆ. ನೆಹರೂ ಮೈದಾನದ ಉದ್ದಗಲಕ್ಕೂ ಬೃಹತ್ ಪೆಂಡಾಲ್ ಅಳವಡಿಸಲಾಗಿದ್ದು, ಕುತೂಹಲಿಗರನ್ನು ಆಕರ್ಷಿಸುತ್ತಿದೆ. ಸುಮಾರು 30 ಸಾವಿರ ಚ.ಅ. ವಿಸ್ತೀರ್ಣದ ಈ ಪೆಂಡಾಲ್‌ನಲ್ಲಿ 500 ಪ್ಯಾನಲ್‌ಗಳನ್ನು ರಚಿಸಲಾಗಿದೆ. ಒಳಗೆ ಸಂಪೂರ್ಣ ಹವಾನಿಯಂತ್ರಿತವಾಗಿದೆ. ಸೆಖೆಯ ಸಮಸ್ಯೆಯೇ ಇಲ್ಲ. ನಮಾಝ್‌ಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಪುಣಾಣಿಗಳಿಗೆ ಕಿಡ್ಸ್ ಕಾರ್ನರ್‌ಗಳನ್ನೂ ಅಳವಡಿಸಲಾಗಿದೆ.
ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ ನಡೆಯುವ ಈ ಪ್ರದರ್ಶನದಲ್ಲಿ ಇಸ್ಲಾಮ್ ಕುರಿತು ಸಂಪೂರ್ಣ ಮಾಹಿತಿಗಳಲ್ಲದೆ ಪ್ರವಾದಿ ಮುಹಮ್ಮದ್ (ಸ.)ರ ಬೋಧನೆಗಳ ಬಗ್ಗೆಯೂ ಸ್ವಯಂ ಸೇವಕರು ಕನ್ನಡ, ಇಂಗ್ಲಿಷ್, ಬ್ಯಾರಿ, ಉರ್ದು ಭಾಷೆಯಲ್ಲಿ ಮಾಹಿತಿ ನೀಡುತ್ತಿದ್ದಾರೆ. ಪ್ರತಿಯೊಂದು ವಿವರವೂ ಇಸ್ಲಾಮ್ ಮತ್ತು ವೈಜ್ಞಾನಿಕತೆಯಿಂದ ಕೂಡಿರುವುದು ವಿಶೇಷ. ಪ್ರತೀ ದಿನ ಸಂಜೆ ವಿವಿಧ ವಿಷಯಗಳಿಗೆ ಸಂಬಂಧಿಸಿ ಪ್ರವಚನ ನೀಡಲಾಗುತ್ತದೆ.
ಇವುಗಳ ವೀಕ್ಷಣೆಗೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಮಳಿಗೆಗಳನ್ನು ಏರ್ಪಡಿಸಲಾಗಿದೆ. ಮಹಿಳೆಯರಿಗೆ ಮಹಿಳೆಯರಿಂದಲೇ ತರಬೇತಿ ನೀಡಲಾಗುತ್ತದೆ. ಕುರ್‌ಆನ್ ಗ್ರಂಥಗಳು ಹಾಗೂ ಇಸ್ಲಾಮ್ ಕುರಿತು ಮಾಹಿತಿ ತಿಳಿಸುವ ಸಿಡಿ, ಡಿವಿಡಿಗಳ ಪ್ರದರ್ಶನ, ಮಾರಾಟವನ್ನೂ ಏರ್ಪಡಿಸಲಾಗಿದೆ.
ಕನ್ನಡ-ಇಂಗ್ಲಿಷ್ ಭಾಷೆಯಲ್ಲಿ ಪ್ರತ್ಯೇಕ ವೀಡಿಯೋ ಥಿಯೇಟರ್ ಇದೆ. ಇಸ್ಲಾಮ್‌ನಲ್ಲಿ ಕೋಮುವಾದಿಗಳಿಗೆ ಅವಕಾಶವೇ ಇಲ್ಲ ಎಂದು ಇಲ್ಲಿ ಸ್ಪಷ್ಟವಾಗಿ ಸಾರಿ ಹೇಳಲಾಗುತ್ತದೆ. ಇಸ್ಲಾಮ್‌ಗೂ ಭಯೋತ್ಪಾದನೆಗೂ ಸಂಬಂಧವಿಲ್ಲ ಎಂದು ತಿಳಿಸಿಕೊಡಲಾಗುತ್ತದೆ. ಇಸ್ಲಾಮ್ ಪ್ರೀತಿಯ, ಮಾನವೀಯತೆಯ ಸಂಕೇತ. ಯಾವ ಕಾರಣಕ್ಕೂ ಅನೈತಿಕ, ಅಧಾರ್ಮಿಕ, ಅಪರಾಧಗಳಿಗೆ ಆಸ್ಪದವಿಲ್ಲ ಎಂದು ಸಾರಲಾಗುತ್ತದೆ. ಹವಾಮಾನ ಬದಲಾವಣೆ, ನೈಸರ್ಗಿಕ ದುರಂತಗಳನ್ನೂ ಅದರಿಂದ ಜನತೆ ಕಲಿತ ಪಾಠಗಳ ಬಗ್ಗೆಯೂ ಉದಾಹರಣೆ ಸಹಿತ ವಿವರಿಸಲಾಗುತ್ತದೆ.
ಭ್ರೂಣಾವಸ್ಥೆಯಿಂದ ಹುಟ್ಟುವವರೆಗಿನ ಇರುವ ವಿವಿಧ ಹಂತಗಳನ್ನು ವಿವರಿಸುವ ಬ್ಯಾನರ್ ಬರಹಗಳು. ದೇಹದ ಅಂಗಾಂಗಗಳಾದ ಕಣ್ಣು, ಕಿವಿ, ಮೂಗು, ಜಠರ, ಶ್ವಾಸಕೋಶ, ರಕ್ತನಾಳ, ಕರಳು, ತಲೆಬುರುಡೆ, ಮೆದುಳುಗಳ ಮಾದರಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಮದ್ಯಪಾನ ಮತ್ತು ಅಮಲು ಪದಾರ್ಥಗಳು ಸೃಷ್ಟಿಸುವ ಅಪಾಯಗಳು, ಅದರಿಂದಾಗುವ ದುಷ್ಪರಿಣಾಮಗಳನ್ನು ಚಿತ್ರಗಳ ಸಹಿತ ವಿವರಣೆಯನ್ನು ನೀಡುವ ಬ್ಯಾನರ್-ಕಟೌಟ್‌ಗಳು ಗಮನ ಸೆಳೆಯುತ್ತಿದೆ.
ಪರ್ದಾದಿಂದ ಯಾರು ಎಷ್ಟು ಸುರಕ್ಷಿತ?, ಇಸ್ಲಾಮೀ ಭಯೋತ್ಪಾದನೆ ನೀವೆಂದಾದರೂ ಕೇಳಿದ್ದೀರಾ?, ಐಸಿಸ್ ಮುಸ್ಲಿಮರಲ್ಲ, ಎಡಗೈಯಿಂದ ತಿನ್ನಬಾರದು, ಬಡ್ಡಿ, ವೃದ್ಧಾಶ್ರಮವು ಮಾನವೀಯತೆಗೆ ಕಳಂಕ, ಆತ್ಮಹತ್ಯೆ ಪರಿಹಾರವಲ್ಲ ಎನ್ನುವಂತಹ ಬ್ಯಾನರ್-ಕಟೌಟ್‌ಗಳು ಕೂಡ ಎದ್ದು ಕಾಣುತ್ತಿತ್ತು. *ಶುಕ್ರವಾರದ ಜುಮಾ ನಮಾಝನ್ನು ‘ಮಿರಾಕಲ್’ ನಡೆಯುವ ಸ್ಥಳದಲ್ಲೇ ನಿರ್ವಹಿಸಲಾಯಿತು. ಮದೀನಾದ ಮಸ್ಜಿದುನ್ನಬವಿ ಶರೀಫ್‌ನ ಬೋರ್ಡ್ ಆಫ್ ಇಸ್ಲಾಮಿಕ್ ಗೈಡನ್ಸ್‌ನ ನಿರ್ದೇಶಕ ಶೈಖ್ ಉಮರ್ ಆಮಿರ್ ಅಲ್ ಖರ್ಮಾನಿ ಜುಮಾ ಖುತ್ಬಾ ಮತ್ತು ನಮಾಝ್‌ನ ನೇತೃತ್ವ ವಹಿಸಿದ್ದರು.
ಜನವರಿ 14ರ ಕಾರ್ಯಕ್ರಮಗಳು
ಜ.14ರ ಸಂಜೆ 4:30ಕ್ಕೆ ವೌಲವಿ ಉಮರ್ ಫಾರೂಕ್ ಮದನಿ ‘ಅಲ್ಲಾಹನ ಇಷ್ಟದಾಸರು’ ಎಂಬ ವಿಷಯದಲ್ಲಿ ಬ್ಯಾರಿ ಭಾಷೆಯಲ್ಲಿ, ಶೈಖ್ ಅಬ್ದುರ್ರಾಝಿಖ್ ಸೌದಾಗರ್ ‘ಲೆಸೆನ್ಸ್ ಫ್ರಮ್ ದಿ ಲೈಫ್ ಆಫ್ ಮುಹಮ್ಮದ್ (ಸ)’ ಎಂಬ ವಿಷಯದಲ್ಲಿ ಇಂಗ್ಲಿಷ್‌ನಲ್ಲಿ ಪ್ರವಚನ ನೀಡಲಿದ್ದಾರೆ.
ಮಗ್ರಿಬ್ ನಮಾಝ್ ಬಳಿಕ ಟಿ.ಕೆ. ಅಶ್ರಫ್ ‘ಐಕ್ಯತೆಯ ಹಾದಿ’ ಎಂಬ ವಿಷಯದಲ್ಲಿ ಮಲಯಾಳಂನಲ್ಲಿ, ಮೌಲವಿ ಇಜಾಝ್ ಸ್ವಲಾಹಿ ‘ಕರುಣೆಯ ಪ್ರವಾದಿ ಮುಹಮ್ಮದ್ (ಸ)’ ಎಂಬ ವಿಷಯದಲ್ಲಿ ಕನ್ನಡದಲ್ಲಿ, ಶೈಖ್ ಜರ್ಜೀಸ್ ಅನ್ಸಾರಿ ‘ತೌಹೀದಿನ ಪ್ರಾಮುಖ್ಯತೆ’ ಎಂಬ ವಿಷಯದಲ್ಲಿ ಉರ್ದುವಿನಲ್ಲಿ ಪ್ರವಚನ ನೀಡಲಿದ್ದಾರೆ.
ಜನವರಿ 15ರ ಕಾರ್ಯಕ್ರಮ
ಜ.15ರ ಸಂಜೆ 4:30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಇಬ್ರಾಹೀಂ ಖಲೀಲ್ ತಲಪಾಡಿ ‘ಇಸ್ಲಾಂ ಶಾಂತಿಗಾಗಿ, ಸಂಘರ್ಷಕ್ಕಲ್ಲ’ಎಂಬ ವಿಷಯದಲ್ಲಿ ಕನ್ನಡದಲ್ಲಿ ಮತ್ತು ಮೌಲವಿ ಅಬ್ದುಲ್ ಮಾಲಿಕ್ ಸಲಫಿ ‘ಹದೀಸ್‌ನ ಪ್ರಾಮುಖ್ಯತೆ’ಎಂಬ ವಿಷಯದಲ್ಲಿ ಮಲಯಾಳಂನಲ್ಲಿ ಪ್ರವಚನ ನೀಡಲಿದ್ದಾರೆ. ಕೆಎಸ್‌ಎ ಅಧ್ಯಕ್ಷ ಮುಹಮ್ಮದ್ ಹನೀಫ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ಮಗ್ರಿಬ್ ನಮಾಝ್ ಬಳಿಕ ಝೈದ್ ಪಟೇಲ್ ‘ದಿ ಟ್ರು ಮೆಸೇಜ್ ಆಫ್ ಕುರ್‌ಆನ್’ ಎಂಬ ವಿಷಯದಲ್ಲಿ ಇಂಗ್ಲಿಷ್‌ನಲ್ಲಿ, ಮೌಲವಿ ಹುಸೈನ್ ಸಲಫಿ ‘ದಿ ಮಿರಾಕಲ್’ ಎಂಬ ವಿಷಯದಲ್ಲಿ ಮಲಯಾಳಂನಲ್ಲಿ ಪ್ರವಚನ ನೀಡಲಿದ್ದಾರೆ.